ADVERTISEMENT

ಮಾನವನ ಮೂಳೆಯಿಂದ ಮಾದಕ ಪದಾರ್ಥ! ಏನಿದು ಜಾಂಬಿ ಡ್ರಗ್ಸ್? ಸ್ಮಶಾನಗಳಿಗೆ ಕಾವಲು!

ಸಿಯೆರಾ ಲಿಯೋನ್ ಸೇರಿದಂತೆ ಪಶ್ಚಿಮ ಆಫ್ರಿಕಾ ರಾಷ್ಟ್ರಗಳನ್ನು ತಲ್ಲಣಗೊಳಿಸುತ್ತಿರುವ ಕುಶ್ ಡ್ರಗ್ಸ್: ಸಿಯೆರಾದಲ್ಲಿ ತುರ್ತು ಪರಿಸ್ಥಿತಿಗೆ ಕಾರಣವಾದ ಹೊಸ ಬಗೆಯ ಮಾದಕ ಪದಾರ್ಥ

ಏಜೆನ್ಸೀಸ್
Published 10 ಏಪ್ರಿಲ್ 2024, 13:46 IST
Last Updated 10 ಏಪ್ರಿಲ್ 2024, 13:46 IST
<div class="paragraphs"><p>ಮಧ್ಯದಲ್ಲಿ ಸಿಯೆರಾ ಲಿಯೋನ್ ಅಧ್ಯಕ್ಷ&nbsp;ಜುಲಿಯೂಸ್ ಮಾಡಾ ಬಿಯೋ, ಎಡ ಬಲ ಸಾಂದರ್ಭಿಕ ಚಿತ್ರಗಳು</p></div>

ಮಧ್ಯದಲ್ಲಿ ಸಿಯೆರಾ ಲಿಯೋನ್ ಅಧ್ಯಕ್ಷ ಜುಲಿಯೂಸ್ ಮಾಡಾ ಬಿಯೋ, ಎಡ ಬಲ ಸಾಂದರ್ಭಿಕ ಚಿತ್ರಗಳು

   

Xಚಿತ್ರ

ಬೆಂಗಳೂರು: ‘ಡ್ರಗ್ಸ್‌’ ಲೋಕಕ್ಕೆ ಕಾಲಿಟ್ಟವರು ಮಾದಕ ಪದಾರ್ಥಗಳನ್ನು ಪಡೆಯಲು ಇನ್ನಿಲ್ಲದ ಕಸರತ್ತುಗಳನ್ನು ಮಾಡುತ್ತಾರೆ ಎನ್ನುವುದನ್ನು ಆಗಾಗ ಮಾಧ್ಯಮಗಳ ವರದಿಗಳಿಂದ ತಿಳಿದುಕೊಳ್ಳುತ್ತಲೇ ಇರುತ್ತೇವೆ.

ADVERTISEMENT

ಕೆಲವರು ಮಾದಕ ವ್ಯಸನದಿಂದ ಹೊರಬಾರದರೇ ಒದ್ದಾಡುತ್ತಿದ್ದರೇ ಇನ್ನೂ ಕೆಲವರು ಜೈಲು, ಆಸ್ಪತ್ರೆಯ ಪಾಲಾಗುತ್ತಾರೆ. ಮತ್ತಷ್ಟು ಜನ ಯಮಲೋಕದ ಪಾಲಾಗುತ್ತಾರೆ. ಆದರೆ, ಅದನ್ನು ಪೂರೈಸುವವರು ಮಾತ್ರ ಡಾನ್‌ಗಳಂತೆ ಮೆರೆಯುತ್ತಾರೆ.

ಗಾಂಜಾ, ಅಫೀಮು , ಕೋಕೇನ್, ಹೆರಾಯಿನ್, ಮರಿಜುವಾನಾ ಸೇರಿದಂತೆ ವಿವಿಧ ರೀತಿಯ ಸಿಂಥೆಟಿಕ್ ಡ್ರಗ್ಸ್‌ಗಳ ಆರ್ಭಟ ಸದ್ಯ ವಿವಿಧ ದೇಶಗಳಲ್ಲಿ ಜೋರಿದೆ. ಈ ಕರಾಳ ದಂಧೆಯಲ್ಲಿರುವ ಡ್ರಗ್ಸ್ ಮಾಫಿಯಾದವರು, ಡ್ರಗ್ಸ್ ಪೆಡ್ಲರ್‌ಗಳು ಹೊಸ ಬಗೆಯ ಡ್ರಗ್ಸ್‌ಗಳ ಪತ್ತೆಗೆ ನಿರಂತರ ಪ್ರಯತ್ನ ಮಾಡುತ್ತಲೇ ಇರುತ್ತಾರೆ.

ಮಾನವನ ಮೂಳೆಯಿಂದ ಡ್ರಗ್ಸ್!

ಪಶ್ಚಿಮ ಆಫ್ರಿಕಾದ ಸಿಯೆರಾ ಲಿಯೋನ್‌ನಲ್ಲಿ (Sierra Leone) ಆ ರಾಷ್ಟ್ರಾಧ್ಯಕ್ಷರು ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ. ಇದಕ್ಕೆ ಕಾರಣ ಹೊಸ ಬಗೆಯ ಒಂದು ಅತ್ಯಂತ ಮಾರಕ ಡ್ರಗ್ಸ್.

ಹೌದು, ಈ ದೇಶವನ್ನು ‘ಕುಶ್’ ಎನ್ನುವ ಹೊಸ ಬಗೆಯ ಡ್ರಗ್ಸ್ ಕಂಗೆಡಿಸಿದ್ದು ಅಲ್ಲಿನ ಪೊಲೀಸರು ಡ್ರಗ್ಸ್ ಕುಳಗಳ ಮೇಲೆ ಕಣ್ಣಿಟ್ಟಿರುವುದಲ್ಲದೇ ಸ್ಮಶಾನಗಳನ್ನೂ ಕಾಯುತ್ತಿದ್ದಾರೆ.

ಸಿಯೇರಾ ಲಿಯೋನ್‌ನಲ್ಲಿ ಇತ್ತೀಚೆಗೆ ಡ್ರಗ್ಸ್ ದಂಧೆಯ ಮೇಲೆ ಕ್ರಮಗಳನ್ನು ಕೈಗೊಂಡು ಸ್ವಲ್ಪ ಮಟ್ಟಿಗೆ ನಿಯಂತ್ರಣಕ್ಕೆ ತಂದಿದ್ದಾರೆ. ಇದರಿಂದ ಪರ್ಯಾಯ ಮಾರ್ಗ ಕಂಡುಕೊಳ್ಳುವ ಸಲುವಾಗಿ ಡ್ರಗ್ಸ್‌ ತಯಾರಿಸುವವರು, ಪೆಡ್ಲರ್‌ಗಳು ‘ಕುಶ್ ಡ್ರಗ್ಸ್’ ಮೊರೆ ಹೋಗಿದ್ದಾರೆ.

ಏನಿದು ಕುಶ್ ಡ್ರಗ್ಸ್?

ಜಾಂಬಿ ಡ್ರಗ್ಸ್ (Zombie) ಎಂದಲೂ ಭಯ ಹುಟ್ಟಿಸುತ್ತಿರುವ ಈ ಡ್ರಗ್ಸ್ ಸಿಯೆರಾ ಲಿಯೋನ್, ಲೈಬಿರಿಯಾ ಹಾಗೂ ಅದರ ಪಕ್ಕದ ಕೆಲ ರಾಷ್ಟ್ರಗಳಲ್ಲಿ ವ್ಯಾಪಕ ಭೀತಿ ಹುಟ್ಟಿಸಿದೆ.

ಲಭ್ಯ ಮಾಹಿತಿ ಪ್ರಕಾರ, ಮಾನವನ ಮೂಳೆಯಿಂದ ಗಂಧಕ ((ಸಲ್ಪರ್) ಸೇರಿದಂತೆ ಕೆಲ ವಸ್ತುಗಳನ್ನು ಬೇರ್ಪಡಿಸಿ ಅದನ್ನು ಮರಿಜುವಾನಾದಂತಹ ಡ್ರಗ್ಸ್‌ ಗಿಡಮೂಲಿಕೆಗಳಿಗೆ ಬೆರೆಯಿಸಿ ಸಿಂಥೆಟಿಕ್ ಡ್ರಗ್ಸ್‌ ತಯಾರಿಸುತ್ತಾರೆ. ಅದುವೇ ಕುಶ್ ಡ್ರಗ್ಸ್.

ಇದಕ್ಕಾಗಿ ಸಿಯೆರಾದ ಡ್ರಗ್ಸ್‌ ತಯಾರಕರು, ವ್ಯಸನಿಗಳು ಸ್ಮಶಾನಗಳನ್ನು ಎಡತಾಕುತ್ತಿದ್ದಾರೆ. ಸಮಾಧಿಗಳನ್ನು ಅಗೆದು ಮಾನವನ ಮೂಳೆಗಳನ್ನು ಕದ್ದೊಯ್ದು ಅದರಿಂದ ಕುಶ್ ಡ್ರಗ್ಸ್ ತಯಾರಿಸುತ್ತಿದ್ದಾರೆ ಎಂದು ಬಿಬಿಸಿ ಏಪ್ರಿಲ್ 5ರಂದು ವರದಿ ಮಾಡಿದೆ.

‘ಕುಶ್ ಒಮ್ಮೆ ಸೇವಿಸಿದ ವ್ಯಕ್ತಿ ಅದಿಲ್ಲದೇ ಬದುಕಲು ಆಗುವುದಿಲ್ಲ ಎನ್ನುವ ಮಟ್ಟಿಗೆ ಮಾನಸಿಕ ಅಸ್ವಸ್ಥತೆಗೆ ಒಳಗಾಗುತ್ತಾನೆ. ಕ್ರಮೇಣ ಕೈ ಕಾಲು ದೇಹದ ಭಾಗಗಳಲ್ಲಿ ತೂತು ಬಿದ್ದಿರುವ ಹಾಗೇ ವಿಕಾರವಾಗಿ ಬದಲಾಗುತ್ತಾನೆ. ನಂತರ ಅಂಗಾಂಗಗಳ ವೈಪಲ್ಯದಿಂದ ಸಾವು ಸಂಭವಿಸುತ್ತದೆ’ ಎಂದು ರಾಜಧಾನಿ ಫ್ರಿಟೌನ್‌ನಲ್ಲಿರುವ ರಾಷ್ಟ್ರದ ಏಕೈಕ ಮಾನಸಿಕ ಆರೋಗ್ಯ ಕೇಂದ್ರದ ವೈದ್ಯ ಡಾ. ಜುಸು ಮೆಟ್ಟಿಯಾ ಹೇಳಿದ್ದಾರೆ.

ಇದು ಅಗ್ಗದ ಬೆಲೆಗೆ ಸಿಗುತ್ತಿರುವುದರಿಂದ ವ್ಯಾಪಕವಾಗಿ ಪ್ರಸರಣವಾಗುತ್ತಿದೆ. ಯುವಕ–ಯುವತಿಯರು ಬಲಿಯಾಗುತ್ತಿದ್ದಾರೆ ಎಂದೂ ಹೇಳಿದ್ದಾರೆ.

‘ಫ್ರಿಟೌನ್‌ನಲ್ಲಿರುವ ಮಾನಸಿಕ ಆರೋಗ್ಯ ಕೇಂದ್ರದಲ್ಲಿ ಕುಶ್ ಡ್ರಗ್ಸ್ ಸಂಬಂಧಿ ದಾಖಲಾಗುತ್ತಿರುವವರ ಸಂಖ್ಯೆ ಇತ್ತೀಚೆಗೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. 1,825 ಜನ ಇದಕ್ಕೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ’ ಎಂದು ತಿಳಿಸಿದ್ದಾರೆ.

ಸಿಯೆರಾದಲ್ಲಿನ ಸರ್ಕಾರದ ಅಧಿಕೃತ ಮಾಹಿತಿ ಪ್ರಕಾರ ಈ ಡ್ರಗ್ಸ್, ಕಳೆದ ನಾಲ್ಕು ವರ್ಷಗಳ ಹಿಂದೆ ಬೆಳಕಿಗೆ ಬಂದಿದೆ. ಇದರಿಂದ ನೂರಾರು ಜನ ಪ್ರಾಣ ಕಳೆದುಕೊಂಡಿದ್ದಾರೆ ಎನ್ನಲಾಗಿದೆ. ಆದರೆ, ಸಾವಿನ ಬಗ್ಗೆ ಅಧಿಕೃತ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿಲ್ಲ.

ಪೂರ್ವ ಆಫ್ರಿಕಾದ ಕೆಲ ರಾಷ್ಟ್ರಗಳಲ್ಲದೇ ಇಂಗ್ಲೆಂಡ್ ಹಾಗೂ ಅಮೆರಿಕಕ್ಕೂ ಈ ಡ್ರಗ್ಸ್ ಕಾಲಿಟ್ಟಿದೆ. ಇದರಿಂದ ಅಲ್ಲೂ ಕೂಡ ಕೆಲವರು ಮೃತಪಟ್ಟಿದ್ದಾರೆ ಎಂದು ಕೆಲ ಅಂತರರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ತುರ್ತು ಪರಿಸ್ಥಿತಿ ಘೋಷಣೆ

ಅನಾಹುತಕಾರಿಯಾಗಿ ಕಂಡು ಬರುತ್ತಿರುವ ಕುಶ್ ಡ್ರಗ್ಸ್‌ನಿಂದ ಎಚ್ಚೆತ್ತಿರುವ ಸಿಯೆರಾ ಲಿಯೋನ್‌ ಅಧ್ಯಕ್ಷ ಜುಲಿಯೂಸ್ ಮಾಡಾ ಬಿಯೋ ಅವರು ರಾಷ್ಟ್ರಾದ್ಯಂತ ಏಪ್ರಿಲ್ 6ರಿಂದ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ.

ಕುಶ್‌ನ ಪರಿಣಾಮದಿಂದ ನಮ್ಮ ದೇಶದ ಯುವಜನರು ವಿನಾಶಕಾರಿ ಹಾದಿ ತುಳಿಯುತ್ತಿದ್ದಾರೆ ಎಂದು ಹೇಳಿದ್ದಾರೆ.

ಡ್ರಗ್ ಮುಕ್ತ ರಾಷ್ಟ್ರ ಕಟ್ಟಲು ರಾಷ್ಟ್ರೀಯ ತಂಡವನ್ನು ಪುನರ್ ರಚನೆ ಮಾಡಲಾಗುವುದು. ಅಲ್ಲದೇ ಸ್ಥಳೀಯ ಸಂಸ್ಥೆಗಳು, ಎನ್‌ಜಿಒಗಳು ಇದರ ವಿರುದ್ಧ ವ್ಯಾಪಕ ಹೋರಾಟ ಮಾಡಬೇಕು ಎಂದು ಆದೇಶಿಸಿದ್ದಾರೆ.

90 ಲಕ್ಷ ಜನಸಂಖ್ಯೆ ಹೊಂದಿರುವ ಸಿಯೆರಾ ಲಿಯೋನ್‌ನಲ್ಲಿ ಕಾಲು ಭಾಗ ಜನ ಬಡತನದ ರೇಖೆ ಕೆಳಗಿದ್ದಾರೆ. 1961ರಲ್ಲಿ ಬ್ರಿಟಿಷರಿಂದ ಸ್ವಾತಂತ್ರ್ಯ ‍ಪಡೆದಿರುವ ಈ ದೇಶಕ್ಕೆ ಇದೀಗ ಡ್ರಗ್ಸ್ ಒಂದು ದೊಡ್ಡ ಶಾಪವಾಗಿ ಪರಿಣಮಿಸುತ್ತಿದೆ.

****

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.