ಶಾರ್ಜಾ: ಮಧ್ಯಪ್ರಾಚ್ಯದ ‘ಪಾರ್ಟಿ ಕ್ಯಾಪಿಟಲ್‘ ಎಂದೇ ಖ್ಯಾತಿಯಾಗಿರುವ ದುಬೈ ಪ್ರವಾಸಿಗರನ್ನು ಸೆಳೆಯಲು ಮದ್ಯದ ಮೇಲಿನ ತೆರಿಗೆಯನ್ನು ಶೇ 30 ರಷ್ಟು ಇಳಿಕೆ ಮಾಡಿದೆ.
ಜತೆಗೆ ಮದ್ಯಪಾನ ಖರೀದಿಗೆ ಬೇಕಾಗಿದ್ದ ಪರವಾನಗಿ ಶುಲ್ಕವನ್ನು ರದ್ದು ಕೂಡ ರದ್ದು ಮಾಡಿದೆ.
ಕಳೆದ ಕೆಲವು ವರ್ಷಗಳಿಂದ ಪ್ರವಾಸಿಗರನ್ನು ಸೆಳೆಯಲು, ದುಬೈ ಹಲವು ನಿಯಮಗಳನ್ನು ಸಡಿಲಗೊಳಿಸುತ್ತಾ ಬಂದಿದೆ. ಈ ಹಿಂದೆ ಮುಸ್ಲಿಮರ ಪವಿತ್ರ ತಿಂಗಳು ರಂಜಾನ್‌ನ ಹಗಲಿನಲ್ಲಿ ಮದ್ಯ ಮಾರಾಟಕ್ಕೆ ನಿಷೇಧ ಇತ್ತು. ಅದನ್ನೂ ತೆಗೆದು ಹಾಕಲಾಗಿದೆ.
ಅಲ್ಲದೇ ಕೋವಿಡ್ ಸಾಂಕ್ರಾಮಿಕದ ವೇಳೆಯಲ್ಲೂ ಮದ್ಯವನ್ನು ಹೋಮ್ ಡೆಲಿವರಿ ಮಾಡುವ ಅವಕಾಶ ಕಲ್ಪಿಸಿತ್ತು.
ವಿದೇಶಿ ಪ್ರವಾಸಿಗರಿಗೆ ದುಬೈಯನ್ನು ಹೆಚ್ಚು ಆಕರ್ಷಕವಾಗಿಸಲು ಹಾಗೂ ಪಕ್ಕದ ರಾಷ್ಟ್ರಗಳ ಸ್ಪರ್ಧೆಯನ್ನು ಎದುರಿಸಲು ದುಬೈ ಈ ಕ್ರಮಕ್ಕೆ ಮುಂದಾಗಿದೆ.
ಮೇರಿಟೈಮ್ ಆ್ಯಂಡ್ ಮೆರ್‌ಕ್ಯಾಂಟೈಲ್ ಇಂಟರ್‌ನ್ಯಾಷನಲ್ (ಎಂಎಂಐ) ಹಾಗೂ ಆಫ್ರಿಕನ್ ಆ್ಯಂಡ್ ಈಸ್ಟರ್ನ್ ಎನ್ನುವ ಎರಡು ಕಂಪನಿಗಳು ದುಬೈನಲ್ಲಿ ಮದ್ಯ ಸರಬರಾಜು ಮಾಡುತ್ತಿದ್ದು, ಇವೆರಡೂ ಕಂಪನಿಗಳು ತೆರಿಗೆ ಕಡಿತ ಮಾಡುವುದಾಗಿ ಹೇಳಿವೆ.
‘ಶೇ 30ರಷ್ಟು ಸ್ಥಳೀಯಾಡಳಿತ ತೆರಿಗೆ ರದ್ದು ಮಾಡಿರುವುದು ಹಾಗು ಮದ್ಯ ಖರೀದಿಗೆ ಪರವಾನಗಿ ರದ್ದು ಮಾಡಿರುವುದರಿಂದ, ಪ್ರವಾಸಿಗರಿಗೆ ತಮ್ಮಿಷ್ಟದ ಮದ್ಯ ಖರೀದಿ ಮಾಡುವುದು ಇನ್ನಷ್ಟು ಸುಲಭವಾಗಲಿದೆ. ಎಮಿರೇಟ್ಸ್‌ನಾದ್ಯಂತ ಇರುವ ತನ್ನೆಲ್ಲಾ ಮಳಿಗೆಗಳಲ್ಲಿ ತೆರಿಗೆ ಕಡಿತ ಮಾಡಲಾಗಿದೆ‘ ಎಂದು ಎಂಎಂಐ ತನ್ನ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹೇಳಿದೆ.
ಭಾನುವಾರದಿಂದ ಈ ಹೊಸ ನಿಯಮ ಜಾರಿಗೆ ಬಂದಿದ್ದು, ಇದು ತಾತ್ಕಾಲಿಕವೇ ಅಥವಾ ಶಾಶ್ವತ ನಿರ್ಧಾರವೇ ಎನ್ನುವುದು ಇನ್ನಷ್ಟೇ ಗೊತ್ತಾಗಬೇಕಿದೆ. ಈ ನಿಯಮ ಒಂದು ವರ್ಷದ ಮಟ್ಟಿಗೆ ಮಾತ್ರ ಇರಲಿದೆ ಎಂದು ಕೆಲವು ಮಾಧ್ಯಮ ಸಂಸ್ಥೆಗಳು ವರದಿ ಮಾಡಿವೆ.
ದುಬೈಗೆ ಪ್ರವಾಸೋದ್ಯಮವೇ ಜೀವಾಳವಾಗಿದ್ದು, ಕೋವಿಡ್ ಬಳಿಕ ಪ್ರವಾಸೋದ್ಯಮದಲ್ಲಿ ಭಾರೀ ಪ್ರಗತಿ ಕಂಡಿತ್ತು. 2021ಕ್ಕೆ ಹೋಲಿಕೆ ಮಾಡಿದರೆ,. 2022ರ ಮೊದಲಾರ್ಧದಲ್ಲಿ ದುಬೈನ ಪ್ರವಾಸೋದ್ಯಮ ಶೇ 180 ರಷ್ಟು ಏರಿಕೆ ಕಂಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.