ದುಬೈ: ಕೋವಿಡ್ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿದ್ದ ಕಾರಣಕ್ಕೆ ಭಾರತ ಸೇರಿದಂತೆ ವಿವಿಧ ರಾಷ್ಟ್ರಗಳ ಪ್ರಯಾಣಿಕರ ಮೇಲೆ ವಿಧಿಸಿದ್ದ ನಿರ್ಬಂಧಗಳನ್ನು ಇದೀಗ ದುಬೈ ಸರ್ಕಾರ ಸಡಿಲಗೊಳಿಸಿದೆ.
ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಅನುಮೋದಿತ ಕೋವಿಡ್ ಲಸಿಕೆಯ ಎರಡು ಡೋಸ್‌ಗಳನ್ನು ಪಡೆದವರು ಭಾರತ ಸೇರಿದಂತೆ ಕೆಲವು ದೇಶಗಳ ನಿವಾಸಿಗಳು ದುಬೈಗೆ ಪ್ರಯಾಣಿಸಬಹುದು ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
ಪ್ರಧಾನಿ ಶೇಖ್ ಮನ್ಸೂರ್ ಬಿನ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಾಕ್ತೌಮ್ ನೇತೃತ್ವದ ಸಮಿತಿಯು ಈ ನಿರ್ಧಾರ ತೆಗೆದುಕೊಂಡಿದೆ. ಜೂನ್ 23ರಿಂದ ದಕ್ಷಿಣ ಆಫ್ರಿಕಾ, ನೈಜೀರಿಯಾ ಮತ್ತು ಭಾರತದಿಂದ ಬರುವ ಪ್ರಯಾಣಿಕರಿಗಾಗಿ ಹೊಸ ಪರಿಷ್ಕೃತ ಮಾರ್ಗಸೂಚಿಯನ್ನು ಹೊರಡಿಸಿದೆ.
ಸಿನೊಫಾರ್ಮ್, ಫಿಜರ್-ಬಯೋಟೆಕ್, ಸ್ಪುಟ್ನಿಕ್ ವಿ ಮತ್ತು ಆಕ್ಸ್‌ಫರ್ಡ್-ಅಸ್ಟ್ರಾಜೆನೆಕಾ ಲಸಿಕೆಗಳನ್ನು ಯುಎಇ ಸರ್ಕಾರ ಅನುಮೋದಿಸಿದೆ.
ಪ್ರಯಾಣಿಕರು ನಿರ್ಗಮನಕ್ಕೆ 48 ಗಂಟೆಗಳ ಮೊದಲು ತೆಗೆದುಕೊಂಡ 'ಆರ್‌ಟಿ–ಪಿಸಿಆರ್' ನೆಗೆಟಿವ್ ವರದಿಯನ್ನು ಕಡ್ಡಾಯವಾಗಿ ತೋರಿಸಬೇಕು ಎಂದು ಹೇಳಲಾಗಿದೆ.
ಭಾರತದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಏಪ್ರಿಲ್‌ನಲ್ಲಿ ಪ್ರಯಾಣಿಕರಿಗೆ ದುಬೈ ಸರ್ಕಾರ ನಿರ್ಬಂಧ ಹೇರಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.