ದುಬೈ: ಮಹಾತ್ಮ ಗಾಂಧಿಯವರ 150ನೇ ಜನ್ಮದಿನವಾದ ಮಂಗಳವಾರ ದುಬೈನಲ್ಲಿರುವ ಬುರ್ಜ್ ಖಲೀಫಾ ಕಟ್ಟಡದಲ್ಲಿ ಎಲ್‍ಇಡಿ ವಿಡಿಯೊ ಪ್ರೊಜೆಕ್ಷನ್ ಮೂಲಕ ಗಾಂಧೀಜಿ ಜೀವನ ಸಂದೇಶವನ್ನು ಡಿಸ್‍ಪ್ಲೇ ಮಾಡಲಾಗಿದೆ.
ವಿದೇಶ ರಾಷ್ಟ್ರಗಳಲ್ಲಿರುವ ಭಾರತೀಯ ಪ್ರಚಾರಕರು ಹಲವಾರು ದೇಶಗಳಲ್ಲಿ ಈ ರೀತಿಯ ವಿಡಿಯೊ ವ್ಯವಸ್ಥೆ ಮೂಲಕ ಗಾಂಧಿ ಸಂದೇಶ ಸಾರಿದ್ದಾರೆ. ಈಗಿನ ಯುವ ಜನಾಂಗಕ್ಕೆ ಪ್ರೇರಣೆ ನೀಡುವುದಕ್ಕಾಗಿ ಮಹಾತ್ಮ ಗಾಂಧಿಯವರ ಜೀವನ ಮತ್ತು ತತ್ವಶಾಸ್ತ್ರವನ್ನು ಎಲ್‍ಇಡಿ ವಿಡಿಯೊದಲ್ಲಿ ಡಿಸ್‍ಪ್ಲೇ ಮಾಡಲಾಗಿದೆ. ಮಹಾತ್ಮ ಗಾಂಧಿಯವರ 150ನೇ ಜನ್ಮದಿನಾಚರಣೆ ಪ್ರಯುಕ್ತ ಇಂದಿನ ಜನಾಂಗಕ್ಕೆ ಗಾಂಧಿ ತತ್ವದ ಅಗತ್ಯವನ್ನು ತೋರಿಸಲು ಈ ವ್ಯವಸ್ಥೆ ಮಾಡಲಾಗಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.
ಬುರ್ಜ್ ಖಲೀಫಾ ಮಾತ್ರವಲ್ಲದೆ ಜಗತ್ತಿನ 120 ಸ್ಥಳಗಳಲ್ಲಿ ಇದೇ ರೀತಿಯ ವಿಡಿಯೊಗಳ ಮೂಲಕ ಗಾಂಧಿ ಸಂದೇಶ ಸಾರಲಾಗಿದೆ.ಲಂಡನ್‍ನ ಪಿಕಾಡಿಲಿ ಸರ್ಕಸ್, ವಿಯೆನ್ನಾದ ವೆಲ್ಟ್ ಮ್ಯೂಸಿಯಂ, ಬುಡಾಪೆಸ್ಟ್ ನಲ್ಲಿರುವ ಬುಡಾ ಕಾಸ್ಟೆಲ್, ರೋಮ್ ನಲ್ಲಿರುವ ಪಲಾಜೋ ಸೆನಾಟೊರಿಯೊ, ಇಂಡೋನೇಷ್ಯಾದ ಪ್ರಂಬನನ್ ದೇವಾಲಯ ಮತ್ತು ಪೆರುವಿನಲ್ಲಿರುವ ಮಿಸೆಯೊ ಡಿ ಆರ್ಟ್ಲ್ಲಿ ಈ ರೀತಿ ವಿಡಿಯೊ ಡಿಸ್‍ಪ್ಲೇ ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.