ಕೊಲಂಬೊ: ಭಾರತದ ₹50.18 ಕೋಟಿ ಆರ್ಥಿಕ ನೆರವಿನಲ್ಲಿ ಅಭಿವೃದ್ಧಿಪಡಿಸಿದ ‘ಕಡಲತಡಿಯ ರಕ್ಷಣಾ ಸಂಯೋಜನಾ ಕೇಂದ್ರ’ವನ್ನು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್, ಶ್ರೀಲಂಕಾ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ ಇಲ್ಲಿ ಉದ್ಘಾಟಿಸಿದರು.
ಶ್ರೀಲಂಕಾ ಪ್ರವಾಸದಲ್ಲಿರುವ ಸಚಿವ ಜೈಶಂಕರ್, ಇದೇ ವೇಳೆ ಪ್ರಧಾನಿ ದಿನೇಶ್ ಗುಣವರ್ಧನಾ ಅವರನ್ನು ಭೇಟಿಯಾಗಿ ಚರ್ಚಿಸಿದ್ದು, ಅಭಿವೃದ್ಧಿ ಮತ್ತು ಸಂಪರ್ಕ ಕ್ಷೇತ್ರದಲ್ಲಿ ಭಾರತ ಅಗತ್ಯ ಬೆಂಬಲ ನೀಡಲಿದೆ ಎಂಬ ಬದ್ಧತೆಯನ್ನು ಪುನರುಚ್ಚರಿಸಿದರು.
ವಿದ್ಯುತ್, ಇಂಧನ, ಸಂವಹನ, ಬಂದರು ಮೂಲಸೌಕರ್ಯ, ವೈಮಾನಿಕ, ಡಿಜಿಟಲ್, ಆರೋಗ್ಯ, ಆಹಾರ ಭದ್ರತೆ, ಶಿಕ್ಷಣ, ಪ್ರವಾಸೋದ್ಯಮ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಬಾಂಧವ್ಯ ವೃದ್ಧಿಪಡಿಸುವ ಕುರಿತಂತೆ ಶ್ರೀಲಂಕಾ ಅಧ್ಯಕ್ಷರ ಜೊತೆ ಚರ್ಚಿಸಿದರು.
ಭೇಟಿ ಕುರಿತಂತೆ ‘ಎಕ್ಸ್’ನಲ್ಲಿಯೂ ಜೈಶಂಕರ್ ಸಂದೇಶ ಹಂಚಿಕೊಂಡಿದ್ದಾರೆ. ಅಭಿವೃದ್ಧಿ ಮತ್ತು ಸಾಮರ್ಥ್ಯ ನಿರ್ಮಾಣ ಕಾರ್ಯಕ್ರಮಗಳು ಶ್ರೀಲಂಕಾದಲ್ಲಿನ ಜನರ ನಿರೀಕ್ಷೆಗಳನ್ನು ಈಡೇರಿಸಲಿವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕೊಲಂಬೊದಲ್ಲಿನ ನೌಕಾಪಡೆ ಕೇಂದ್ರ ಕಚೇರಿ ಆವರಣದಲ್ಲಿ ‘ಕಡಲತಡಿಯ ರಕ್ಷಣಾ ಸಂಯೋಜನಾ ಕೇಂದ್ರ’ದ ಸ್ಥಾಪನೆ ಜೊತೆಗೆ ಹಂಬನಟೊಟದಲ್ಲಿ ಉಪ ಕೇಂದ್ರ, ಅರುಗಂಬೆ, ಬಟ್ಟಿಕಲೊಅ, ಕಲ್ಲರಾವಾ ಸೇರಿದಂತೆ ಐದು ಕಡೆ ಕಾವಲುರಹಿತ ಕಣ್ಗಾವಲು ವ್ಯವಸ್ಥೆಯನ್ನು ಭಾರತದ ಆರ್ಥಿಕ ನೆರವಿನಲ್ಲಿ ಅಭಿವೃದ್ಧಿಪಡಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.