ಇಸ್ಲಾಮಾಬಾದ್: ‘ಭಯೋತ್ಪಾದನೆ, ಉಗ್ರವಾದ ಹಾಗೂ ಪ್ರತ್ಯೇಕತಾವಾದ ಈ ಮೂರು ಅನಿಷ್ಟ ಗಳು ಪ್ರಾದೇಶಿಕ ಸಹಕಾರಕ್ಕೆ ಅಡ್ಡಿಯಾಗಿವೆ’ ಎಂದು ಹೇಳುವ ಮೂಲಕ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಚೀನಾ ಮತ್ತು ಪಾಕಿಸ್ತಾನಕ್ಕೆ ಸೂಕ್ಷ್ಮ ಸಂದೇಶ ರವಾನಿಸಿದರು.
ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅಧ್ಯಕ್ಷತೆಯಲ್ಲಿ ನಡೆದ ಶಾಂಘೈ ಸಹಕಾರ ಸಂಘಟನೆಯ (ಎಸ್‌ಸಿಒ) ಶೃಂಗ ಸಭೆಯಲ್ಲಿ ಮಾತನಾಡಿದ ಜೈಶಂಕರ್, ವ್ಯಾಪಾರ ಮತ್ತು ಸಂಪರ್ಕ ಉಪಕ್ರಮಗಳು ಪ್ರಾದೇಶಿಕ ಸಮಗ್ರತೆ ಮತ್ತು ಸಾರ್ವಭೌಮತ್ವವನ್ನು ಎತ್ತಿಹಿಡಿಯ ಬೇಕು. ನಂಬಿಕೆ, ವಿಶ್ವಾಸದ ಕೊರತೆ ಉಂಟಾದಾಗ, ಪ್ರಾಮಾಣಿಕವಾದ ಮಾತುಕತೆ ಮೂಲಕ ಅದನ್ನು ಸರಿಪಡಿಸಿಕೊಳ್ಳುವ ಅಗತ್ಯವಿದೆ ಎಂದು
ಪ್ರತಿಪಾದಿಸಿದರು.
‘ಗಡಿಯಾಚೆಗಿನ ಚಟುವಟಿಕೆಗಳು ಭಯೋತ್ಪಾದನೆ, ಉಗ್ರವಾದ ಮತ್ತು ಪ್ರತ್ಯೇಕತಾವಾದದಿಂದ ನಿರೂಪಿಸಲ್ಪಟ್ಟಿದ್ದರೆ, ಅವು ವ್ಯಾಪಾರ, ಇಂಧನ ಪೂರೈಕೆ, ಸಂಪರ್ಕ ಹಾಗೂ ಇದಕ್ಕೆ ಪೂರಕವಾಗಿ ಜನರ ನಡುವಿನ ಒಡನಾಟ ಉತ್ತೇಜಿಸುವ ಸಾಧ್ಯತೆ ಕಡಿಮೆ’ ಎಂದು ಪಾಕಿಸ್ತಾನವನ್ನು ಹೆಸರಿಸದೆ ಹೇಳಿದರು.
ಪೂರ್ವ ಲಡಾಖ್‌ನಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವಿನ ದೀರ್ಘಕಾಲದ ಸಂಘರ್ಷ ಮತ್ತು ಹಿಂದೂ ಮಹಾಸಾಗರ ಹಾಗೂ ಇತರ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಚೀನಾದ ಮಿಲಿಟರಿ ಬಲದ ಬಗೆಗಿನ ಕಳವಳದ ನಡುವೆ ಜೈಶಂಕರ್ ಈ ಹೇಳಿಕೆ ನೀಡಿದ್ದಾರೆ.
ಎಸ್‌ಸಿಒ ಶೃಂಗ ಸಭೆಯಲ್ಲಿ ಶೆಹಬಾಜ್ ಷರೀಫ್ ಅವರ ಉದ್ಘಾಟನಾ ಭಾಷಣ ಮುಗಿದ ತಕ್ಷಣ ಜೈಶಂಕರ್ ಮಾತನಾಡಿದರು. ಈ ಸಭೆಯಲ್ಲಿ ಚೀನಾ ಪ್ರಧಾನಿ ಲಿ ಕಿಯಾಂಗ್ ಅವರೂ
ಭಾಗವಹಿಸಿದ್ದರು.
ಸಹಕಾರವು ಪರಸ್ಪರ ಗೌರವ ಮತ್ತು ಸಾರ್ವಭೌಮತ್ವ, ಸಮಾನತೆಯನ್ನು ಆಧರಿಸಿರಬೇಕು. ಎಸ್‌ಸಿಒ ಸದಸ್ಯ ರಾಷ್ಟ್ರಗಳು ಒಗ್ಗಟ್ಟಾಗಿ ಮುನ್ನಡೆಯುವುದರಿಂದ ಸದಸ್ಯ ರಾಷ್ಟ್ರಗಳು ಹೆಚ್ಚಿನ ಪ್ರಯೋಜನವನ್ನು ಪಡೆಯಬಹುದಾಗಿದೆ ಎಂದು ಹೇಳಿದರು. ವಿಶೇಷವಾಗಿ ಎಸ್‌ಸಿಒ ಕಾರ್ಯಸೂಚಿಗೆ ಬದ್ಧವಾಗಿರುವುದನ್ನು ಒತ್ತಿಹೇಳಿದ ಜೈಶಂಕರ್, ‘ಒಳ್ಳೆಯ ನೆರೆಹೊರೆ’ ಕಾಣೆಯಾಗಿದೆ. ನೆರೆಹೊರೆಯ ದೇಶಗಳ ನಡುವೆ ಉತ್ತಮ ಸಂಬಂಧ ಮತ್ತು ನಂಬಿಕೆಯ ಕೊರತೆ ಉಂಟಾಗಿದೆ. ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವಿದೆ’ ಎಂದು ಪಾಕಿಸ್ತಾನ ಮತ್ತು ಚೀನಾದ ಹೆಸರನ್ನು ನೇರವಾಗಿ ಉಲ್ಲೇಖಿಸದೆ ಹೇಳಿದರು.
ಭದ್ರತಾ ಮಂಡಳಿಯ ಸಮಗ್ರ ಸುಧಾರಣೆಯ ಅಗತ್ಯವಿದೆ. ಅಂತಹ ಬದಲಾವಣೆಯನ್ನು ಪ್ರತಿಪಾದಿಸುವ ಮುಂದಾಳತ್ವದಲ್ಲಿ ಎಸ್‌ಸಿಒ ಇರಬೇಕು.ಎಸ್.ಜೈಶಂಕರ್, ವಿದೇಶಾಂಗ ವ್ಯವಹಾರಗಳ ಸಚಿವ
ಜೈಶಂಕರ್ –ದರ್ ಔಪಚಾರಿಕ ಮಾತುಕತೆ
ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಮತ್ತು ಪಾಕಿಸ್ತಾನದ ವಿದೇಶಾಂಗ ಸಚಿವ ಐಶಾಕ್ ದರ್ ಅವರು ಶಾಂಘೈ ಸಹಕಾರ ಸಂಘಟನೆಯ ಶೃಂಗಸಭೆಯ ನೇಪಥ್ಯದಲ್ಲಿ ಎರಡು ಬಾರಿ ಔಪಚಾರಿಕವಾದ ಮಾತುಕತೆ ನಡೆಸಿದರು.
ಆದಾಗ್ಯೂ, ಉಭಯ ರಾಷ್ಟ್ರಗಳ ನಡುವೆ ಹಳಸಿರುವ ಸಂಬಂಧಗಳಲ್ಲಿ ಯಾವುದೇ ಸುಧಾರಣೆಯಾಗುವ ಲಕ್ಷಣಗಳು ಈ ಭೇಟಿ ಮತ್ತು ಮಾತುಕತೆ ವೇಳೆ ಕಂಡುಬರಲಿಲ್ಲ ಎಂದು ರಾಜತಾಂತ್ರಿಕ ಮೂಲಗಳು ತಿಳಿಸಿವೆ.
ಶೃಂಗಸಭೆಯಲ್ಲಿ ಭಾಗವಹಿಸಿದ್ದ ಪ್ರತಿನಿಧಿಗಳ ಗೌರವಾರ್ಥ ಪಾಕ್ ಪ್ರಧಾನಿಯವರ ನಿವಾಸದಲ್ಲಿ ಮಂಗಳವಾರ ಸಂಜೆ ಆಯೋಜಿಸಿದ್ದ ಔತಣಕೂಟದಲ್ಲಿ ಜೈಶಂಕರ್ ಮತ್ತು ದರ್ ನಡುವೆ ಈ ಮಾತುಕತೆ ನಡೆಯಿತು ಎಂದು ಮೂಲಗಳು ತಿಳಿಸಿವೆ.
ಅಲ್ಲದೆ, ಬುಧವಾರ ಶೃಂಗಸಭೆಯ ನಂತರ ಭೋಜನದ ವೇಳೆ ಜೈಶಂಕರ್ ಮತ್ತು ದರ್ ಅವರು ಅಕ್ಕಪಕ್ಕ ಕುಳಿತು ಊಟ ಮಾಡಿದರು. ಈ ವೇಳೆ ಉಭಯ ನಾಯಕರು ಸಂಭಾಷಣೆಯಲ್ಲಿ ತೊಡಗಿದ್ದು ಸಕಾರಾತ್ಮಕ ಸಂಕೇತವಾಗಿ ಕಂಡುಬಂದಿದೆ ಎಂದು ಮೂಲಗಳು ತಿಳಿಸಿವೆ.
ಔತಣಕೂಟದ ವೇಳೆ ಮತ್ತು ಶೃಂಗಸಭೆಯಲ್ಲಿ ಜೈಶಂಕರ್ ಅವರಿಗೆ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಹಸ್ತಲಾಘವ ನೀಡಿ ಆತ್ಮೀಯವಾಗಿ ಸ್ವಾಗತಿಸಿದರು. ಉಭಯ ನಾಯಕರು ಕುಶಲೋಪರಿ ಕೂಡ ನಡೆಸಿದರು.
ಔತಣಕೂಟದ ವೇಳೆ ಭಾರತೀಯ ಶಾಸ್ತ್ರೀಯ ನೃತ್ಯ ಪ್ರಕಾರ ‘ಭರತನಾಟ್ಯ’ ಪ್ರಸ್ತುತಪಡಿಸಲಾಯಿತು ಎಂದು ತಿಳಿದುಬಂದಿದೆ.
ಪಾಕಿಸ್ತಾನದ ಗೃಹ ಸಚಿವ ಮತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಮೊಹ್ಸಿನ್ ನಖ್ವಿ, ಜೈಶಂಕರ್ ಮತ್ತು ದರ್ ನಡುವೆ ನಡೆದಿರುವ ಔಪಚಾರಿಕ ಮಾತುಕತೆಯು ಉಭಯ ರಾಷ್ಟ್ರಗಳ ನಡುವಿನ ಕ್ರಿಕೆಟ್ ಸಂಬಂಧಗಳನ್ನು ಸುಧಾರಿಸಲಿದೆ ಎಂದು ಹೇಳಿದ್ದಾರೆ.
‘ಒನ್ ಬೆಲ್ಟ್ ಒನ್ ರೋಡ್’ ಅನುಮೋದಿಸದ ಭಾರತ
ಚೀನಾದ ಮಹತ್ವಾಕಾಂಕ್ಷೆಯ ‘ಒನ್ ಬೆಲ್ಟ್ ಒನ್ ರೋಡ್’ (ಒಬಿಒಆರ್) ಉಪಕ್ರಮವನ್ನು ಅನುಮೋದಿಸಲು ಭಾರತವು ಬುಧವಾರ ಮತ್ತೊಮ್ಮೆ ನಿರಾಕರಿಸಿದೆ.
ಈ ವಿವಾದಾತ್ಮಕ ಸಂಪರ್ಕ ಯೋಜನೆಯನ್ನು ಬೆಂಬಲಿಸದ ಶಾಂಘೈ ಸಹಕಾರ ಸಂಘಟನೆಯ(ಎಸ್‌ಸಿಒ) ಸದಸ್ಯ ರಾಷ್ಟ್ರಗಳಲ್ಲಿ ಭಾರತ ಏಕೈಕ ದೇಶವಾಗಿದೆ. ಈ ಹಿಂದಿನ ಶೃಂಗಸಭೆಗಳಲ್ಲೂ ಭಾರತ ಒಬಿಒಆರ್ ಅನುಮೋದಿಸಲು ನಿರಾಕರಿಸಿತ್ತು.
ಎಸ್‌ಸಿಒ ಶೃಂಗಸಭೆಯ ಕೊನೆಯಲ್ಲಿ ಬಿಡುಗಡೆ ಮಾಡಿದ ಜಂಟಿ ಹೇಳಿಕೆಯಲ್ಲಿ ರಷ್ಯಾ, ಬೆಲಾರೂಸ್, ಇರಾನ್, ಕಜಕಿಸ್ತಾನ, ಕಿರ್ಗಿಸ್ತಾನ, ಪಾಕಿಸ್ತಾನ, ತಜಕಿಸ್ತಾನ ಮತ್ತು ಉಜ್ಬೆಕಿಸ್ತಾನ ಚೀನಾದ ಒಬಿಒಆರ್ ಸಂಪರ್ಕ ಉಪಕ್ರಮಕ್ಕೆ ತಮ್ಮ ಬೆಂಬಲವನ್ನು ಪುನರುಚ್ಚರಿಸಿವೆ.
‘ಯುರೇಷಿಯನ್ ಎಕನಾಮಿಕ್ ಯೂನಿಯನ್’ ಅನ್ನು ಒಬಿಒಆರ್‌ನೊಂದಿಗೆ ಜೋಡಿಸುವ ಪ್ರಯತ್ನಗಳು ಸೇರಿದಂತೆ ಯೋಜನೆಯ ಅನುಷ್ಠಾನದಲ್ಲಿ ನಡೆಯುತ್ತಿರುವ ಕೆಲಸವನ್ನು ದೇಶಗಳು ಗಮನಿಸಿವೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.
‘ಸಂಕುಚಿತ ದೃಷ್ಟಿಕೋನ ಬೇಡ’: ಚೀನಾದ ಬೆಲ್ಟ್ ಅಂಡ್ ರೋಡ್ ಉಪಕ್ರಮಕ್ಕೆ ಅಂಟಿಕೊಂಡಿರುವ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್, ಈ ಯೋಜನೆಯನ್ನು ‘ರಾಜಕೀಯ ಸಂಕುಚಿತ ದೃಷ್ಟಿಕೋನದಿಂದ ನೋಡಬಾರದು’ ಎಂದು ಎಸ್‌ಸಿಒ ಶೃಂಗಸಭೆಯಲ್ಲಿ ಪ್ರತಿಪಾದಿಸಿದ್ದಾರೆ. ಈ ಯೋಜನೆ ಅನುಮೋದಿಸಲು ಭಾರತ ಹಿಂಜರಿಯುತ್ತಿರುವ ಹಿನ್ನೆಲೆಯಲ್ಲಿ ಷರೀಫ್ ಈ ಮಾತು ಹೇಳಿದಂತಿದೆ.
ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್‌ನಂತಹ ದೊಡ್ಡ ಯೋಜನೆಯ ಭಾಗವಾಗಿರುವ ಚೀನಾದ ಬೆಲ್ಟ್ ಮತ್ತು ರೋಡ್ ಉಪ ಕ್ರಮವನ್ನು ವಿಸ್ತರಿಸಬೇಕು ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.