ಮಾಸ್ಕೊ: ಮನುಷ್ಯರನ್ನೇ ಹೋಲುವ ರೋಬೊ ಅಭಿವೃದ್ಧಿಪಡಿಸಿರುವ ರಷ್ಯಾ, ಗುರುವಾರ ಮಾನವರಹಿತ ರಾಕೆಟ್ ಮೂಲಕ ಇದನ್ನು ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ(ಐಎಸ್‌ಎಸ್) ಯಶಸ್ವಿಯಾಗಿ ಕಳುಹಿಸಿದೆ.
‘ಫಿಡೋರ್’ ಹೆಸರಿನ ಈ ರೋಬೊ 10 ದಿನ ಐಎಸ್‌ಎಸ್‌ನಲ್ಲಿ ಗಗನಯಾತ್ರಿ ಗಳಿಗೆ ನೆರವಾಗಲಿದೆ.
ರಷ್ಯಾದ ಬೈಕೊನುರ್ ಕೋಸ್ಮೋಡ್ರೋಮ್ ಉಡಾವಣಾ ಕೇಂದ್ರದಿಂದಗುರುವಾರ ಬೆಳಗ್ಗೆ 6.38ಕ್ಕೆ(ಮಾಸ್ಕೊ ಸಮಯ) ಸೊಯುಜ್ ಎಂಎಸ್ 14 ರಾಕೆಟ್ ಉಡಾವಣೆಗೊಂಡಿತು. ಶನಿವಾರ ಐಎಸ್‌ಎಸ್ ಜತೆ ಜೋಡಣೆಯಾಗಲಿ ರುವ ಸೊಯುಜ್ ಸೆಪ್ಟೆಂಬರ್ 7ರ ವರೆಗೂ ಉಳಿಯಲಿದೆ.
ಸಾಮಾನ್ಯವಾಗಿ ಸೊಯುಜ್ ರಾಕೆಟ್‌ಗಳನ್ನು ಗಗನಯಾತ್ರಿಗಳೇ ನಿಯಂತ್ರಿಸುತ್ತಾರೆ. ಆದರೆ ಈ ಬಾರಿ ಮಾನವರಹಿತವಾದ ಉಡಾವಣೆ ಕೈಗೊಳ್ಳಲಾಗಿದೆ. ವಿಶೇಷವಾದ ಪೈಲಟ್ ಆಸನದಲ್ಲಿ ರಷ್ಯಾದ ಧ್ವಜ ಹಿಡಿದು ಕುಳಿತ ಫಿಡೋರ್,ಉಡಾವಣೆ ಸಂದರ್ಭದಲ್ಲಿ ‘ಲೆಟ್ಸ್ ಗೋ..ಲೆಟ್ಸ್ ಗೋ’ ಎಂದಿದೆ. 5 ಅಡಿ 11 ಇಂಚು ಎತ್ತರದ ಈ ರೋಬೊ 160 ಕೆ.ಜಿ. ತೂಕವಿದೆ.
ಸಾಮಾಜಿಕ ಜಾಲತಾಣ ಖಾತೆ: ಫಿಡೋರ್ ಸಾಮಾಜಿಕ ಜಾಲತಾಣ ಗಳಾದ ಟ್ವಿಟರ್ ಹಾಗೂ ಇನ್‌ಸ್ಟಾಗ್ರಾಂನಲ್ಲಿ ಸಕ್ರಿಯವಾಗಿದೆ. ನೀರಿನ ಬಾಟಲ್‌ನ ಮುಚ್ಚಳ ತೆಗೆಯುವುದು ಸೇರಿದಂತೆ ಹಲವು ಕೌಶಲಗಳನ್ನು ಕಲಿಯುವ ಆಸಕ್ತಿಯನ್ನು ರೊಬೊ ತೋರಿದೆ. ಐಎಸ್‌ಎಸ್‌ನಲ್ಲಿ ಅತಿ ಕಡಿಮೆ ಗುರುತ್ವಾಕರ್ಷಣೆ ವಾತಾವರಣದಲ್ಲಿ ಫಿಡೋರ್ ಮತ್ತಷ್ಟು ಕೌಶಲಗಳಪ್ರಯೋಗ ಮಾಡಲಿದೆ.
‘ವಿದ್ಯುತ್ ಕೇಬಲ್‌ಗಳ ಜೋಡಣೆ, ಸ್ಕ್ರೂಡ್ರೈವರ್, ಬೆಂಕಿ ನಿರೋಧಕ ಉಪಕರಣದ ಬಳಕೆ ಮುಂತಾದುವುಗಳನ್ನು ರೋಬೊ ಮಾಡಲಿದೆ’ ಎಂದು ರಷ್ಯಾ ಬಾಹ್ಯಾಕಾಶ ಸಂಸ್ಥೆಯ ನಿರ್ದೇಶಕ ಅಲೆಕ್ಸಾಂಡರ್ ಬ್ಲೊಶೆಂಕೋ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.