ADVERTISEMENT

ಅಗತ್ಯವಸ್ತು ತಲುಪಿಸಲು ರಫಾ ಗಡಿಯಲ್ಲಿ ಈಜಿಪ್ಟ್‌ನಿಂದ ರಸ್ತೆ ದುರಸ್ತಿ

ರಾಯಿಟರ್ಸ್
Published 19 ಅಕ್ಟೋಬರ್ 2023, 14:31 IST
Last Updated 19 ಅಕ್ಟೋಬರ್ 2023, 14:31 IST
REUTERS/LISI NIESNER
   REUTERS/LISI NIESNER

ಕೈರೊ: ಈಜಿಪ್ಟ್‌ ಗಡಿ ಮೂಲಕ ಗಾಜಾಕ್ಕೆ ಅಗತ್ಯವಸ್ತುಗಳನ್ನು ತಲುಪಿಸಲು ಅಡ್ಡಿಪಡಿಸುವುದಿಲ್ಲ ಎಂದು ಇಸ್ರೇಲ್‌ ಹೇಳಿಕೆ ನೀಡಿದ ಬೆನ್ನಲ್ಲೇ, ರಫಾ ಗಡಿಯಲ್ಲಿ ರಸ್ತೆ ದುರಸ್ತಿಪಡಿಸಲು ಈಜಿಪ್ಟ್‌ ಯಂತ್ರೋಪಕರಣಗಳನ್ನು ಕಳಿಸಿದೆ ಎಂದು ಅಲ್ಲಿಯ ಭದ್ರತಾ ಪಡೆಯ ಮೂಲಗಳು ಗುರುವಾರ ತಿಳಿಸಿವೆ. 

ರಫಾ ಮಾರ್ಗವು ಇಸ್ರೇಲ್‌ ನಿಂತ್ರಣದಲ್ಲಿರದ ಏಕೈಕ ಗಡಿ ಮಾರ್ಗವಾಗಿದೆ. ಇಸ್ರೇಲ್‌– ಹಮಾಸ್‌ ನಡುವೆ ಸಂಘರ್ಷ ಆರಂಭವಾದಾಗಿನಿಂದ ಈ ಮಾರ್ಗ ಸ್ಥಗಿತಗೊಂಡಿದೆ. ಈಜಿಪ್ಟ್‌ನ ಸಿನಾಯ್‌ ಪರ್ಯಾಯ ದ್ವೀಪದಲ್ಲಿ ದಾಸ್ತಾನು ಇರಿಸಿರುವ ಅಗತ್ಯವಸ್ತುಗಳನ್ನು ಈ ಮಾರ್ಗದ ಮೂಲಕ ಗಾಜಾ ಪಟ್ಟಿಗೆ ತಲುಪಿಸಲಾಗುವುದು.

ಅಗತ್ಯವಸ್ತುಗಳನ್ನು ಗಾಜಾಕ್ಕೆ ತಲುಪಿಸಲು ಇಸ್ರೇಲ್‌ ಮನವೊಲಿಸಲು ಅಮೆರಿಕ ಮತ್ತು ಈಜಿಪ್ಟ್‌ ದೇಶಗಳು ಪ್ರಯತ್ನಿಸುತ್ತಿದ್ದವು. ಗಾಜಾಕ್ಕೆ 20 ಟ್ರಕ್‌ಗಳಲ್ಲಿ ಅಗತ್ಯವಸ್ತುಗಳನ್ನು ತಲುಪಿಸಲು ಇಸ್ರೇಲ್‌ ಒಪ್ಪಿಕೊಂಡಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಟ್ರಕ್‌ಗಳನ್ನು ಕಳಿಸುವ ಭರವಸೆ ಇದೆ ಎಂದು ಅಮೆರಿಕ ಬುಧವಾರವಷ್ಟೇ ಹೇಳಿತ್ತು. 

ADVERTISEMENT

ವಿಶ್ವಸಂಸ್ಥೆ ಪ್ರಕಾರ, ಸದ್ಯದ ಯುದ್ಧ ಆರಂಭವಾಗುವ ಮೊದಲೂ ಗಾಜಾದ 23 ಲಕ್ಷ ನಿವಾಸಿಗಳ ಜೀವನವು ಅವರಿಗೆ ದೊರಕುವ ನೆರವಿನ ಮೇಲೆ ಆಧರಿಸಿತ್ತು. ಪ್ರತಿದಿನ 100ಕ್ಕೂ ಹೆಚ್ಚು ಟ್ರಕ್‌ಗಳಲ್ಲಿ ಅಗತ್ಯವಸ್ತುಗಳನ್ನು ಮಾನವೀಯ ನೆಲೆಯಲ್ಲಿ ಗಾಜಾಕ್ಕೆ ಕಳಿಸಲಾಗುತ್ತಿತ್ತು.  

ನೂರಕ್ಕೂ ಹೆಚ್ಚು ಟ್ರಕ್‌ಗಳು ಗುರುವಾರ ಈಜಿಪ್ಟ್‌– ಗಾಜಾ ಗಡಿ ಬಳಿ ಕಾಯುತ್ತಾ ನಿಂತಿವೆ. ಆದರೂ ಶುಕ್ರವಾರದ ಒಳಗೆ ನೆರವು  ತಲುಪುವ ನಿರೀಕ್ಷೆ ಇಲ್ಲ’ ಎಂದು ಈಜಿಪ್ಟ್‌ನ ಭದ್ರತಾ ಪಡೆ ಮೂಲಗಳು ತಿಳಿಸಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.