ವಾಷಿಂಗ್ಟನ್: ಅಮೆರಿಕ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರನ್ನು ಉದ್ಯಮಿ ಇಲಾನ್ ಮಸ್ಕ್ ಅವರು ತಮ್ಮದೇ ಒಡೆತನದ ಎಕ್ಸ್‌ನಲ್ಲಿ ಸಂದರ್ಶನ ನಡೆಸಲಿದ್ದಾರೆ.
ಈ ಸಂದರ್ಶನವು ಅಮೆರಿಕದ ET ಕಾಲಮಾನ ಪ್ರಕಾರ ಸೋಮವಾರ ರಾತ್ರಿ 8ಕ್ಕೆ (ಭಾರತೀಯ ಕಾಲಮಾನದಲ್ಲಿ ಮಂಗಳವಾರ ಬೆಳಿಗ್ಗೆ 5.30) ಎಕ್ಸ್‌ನಲ್ಲಿ ನೇರ ಪ್ರಸಾರವಾಗಲಿದೆ.
ನ. 5ರಂದು ಅಮೆರಿಕದ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ಡೆಮಾಕ್ರೆಟಿಕ್ ಪಕ್ಷದಿಂದ ಹಾಲಿ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರು ಟ್ರಂಪ್ ವಿರುದ್ಧ ಸ್ಪರ್ಧಿಸುತ್ತಿದ್ದಾರೆ.
ಫಾಕ್ಸ್ ನ್ಯೂಸ್‌ನಲ್ಲಿ ಪ್ರಸಾರವಾದ ಟ್ರಂಪ್ ಅವರ ಸಂದರ್ಶನ ವೀಕ್ಷಿಸದ ಹಲವರನ್ನು ಎಕ್ಸ್ ಸಂದರ್ಶನದ ಮೂಲಕ ತಲುಪುವ ಪ್ರಯತ್ನ ನಡೆದಿದೆ ಎಂದೆನ್ನಲಾಗಿದೆ.
ಈ ಸಂದರ್ಶನವು ಟ್ರಂಪ್ ಅವರ ಅಧಿಕೃತ ಎಕ್ಸ್ ಖಾತೆಯಲ್ಲಿ (@realDonaldTrump) ನೇರ ಪ್ರಸಾರವಾಗಲಿದೆ. ಅಮೆರಿಕದ ಕಾಂಗ್ರೆಸ್ ಮೇಲೆ 2021ರ ಜ. 6ರಂದು ನಡೆದ ದಾಳಿಯ ನಂತರ ಟ್ವಿಟರ್ (ಈಗ ಎಕ್ಸ್) ಹಿಂದಿನ ಮಾಲೀಕರು ಟ್ರಂಪ್ ಖಾತೆಯನ್ನು ಅಮಾನತಿನಲ್ಲಿರಿಸಿದ್ದರು.
ಇವರ ಖಾತೆಯನ್ನು 2023ರ ಆಗಸ್ಟ್‌ನಲ್ಲಿ ಸಕ್ರಿಯಗೊಳಿಸಲಾಗಿತ್ತು. ನಂತರವಷ್ಟೇ ಟ್ರಂಪ್ ಎಕ್ಸ್‌ನಲ್ಲಿ ಸಕ್ರಿಯರಾಗಿದ್ದರು. ಮಸ್ಕ್ ಅವರು 2020ರಿಂದ ಟ್ರಂಪ್ ಅವರ ಬೆಂಬಲಿಗ ಎಂದು ವರದಿಯಾಗಿದೆ.
ಮಸ್ಕ್ ಅವರ ಒಡೆತನದ ಟೆಸ್ಲಾ ಕೂಡಾ ಟ್ರಂಪ್ ಚುನಾವಣೆಗೆ ನಿಧಿ ಸಂಗ್ರಹಿಸುವ ಸಂಸ್ಥೆಯನ್ನು ಆರಂಭಿಸಿದೆ. ಹೀಗಾಗಿ ಟ್ರಂಪ್ ಕೂಡಾ ಟೆಸ್ಲಾವನ್ನು ಬೆಂಬಲಿಸಿದ್ದಾರೆ. ‘ನಾನು ಎಲೆಕ್ಟ್ರಿಕ್ ಕಾರನ್ನು ಬೆಂಬಲಿಸುತ್ತೇನೆ. ನಾನು ಹಾಗೆ ಮಾಡಲೇಬೇಕು. ಏಕೆಂದರೆ ಇಲಾನ್ ನನ್ನನ್ನು ಬೆಂಬಲಿಸುತ್ತಿದ್ದಾರೆ. ಹೀಗಾಗಿ ನನಗೆ ಬೇರೆ ಆಯ್ಕೆಗಳೇ ಇಲ್ಲ’ ಎಂದು ಟ್ರಂಪ್ ಕಳೆದ ಆಗಸ್ಟ್ ರ‍್ಯಾಲಿಯಲ್ಲಿ ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.