ವಾಷಿಂಗ್ಟನ್: ಟೆಸ್ಲಾ ಮಾಲೀಕ ಎಲಾನ್ ಮಸ್ಕ್ ಮತ್ತು ಭಾರತೀಯ ಮೂಲಕ ಅಮೆರಿಕ ಉದ್ಯಮಿ ವಿವೇಕ್ ರಾಮಸ್ವಾಮಿ ಅವರು ಅಮೆರಿಕ ಸರ್ಕಾರದ ಕಾರ್ಯದಕ್ಷತಾ ಇಲಾಖೆ(ಡಿಒಜಿಇ)ಯ ಉಸ್ತುವಾರಿ ವಹಿಸಿಕೊಳ್ಳಲಿದ್ದಾರೆ ಎಂದು ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ಘೋಷಿಸಿದ್ದಾರೆ.
ಆಡಳಿತ ವ್ಯವಸ್ಥೆ ಸುಧಾರಣೆಗೆ ಕ್ರಮ ಕೈಗೊಳ್ಳುವುದರ ಜೊತೆಗೆ ಅನಗತ್ಯ ವೆಚ್ಚಗಳನ್ನು ಕಡಿತ ಮಾಡುವುದು ಈ ಇಲಾಖೆಯ ಉದ್ದೇಶ. ಈ ನಿಟ್ಟಿನಲ್ಲಿ ಗುರಿ ಸಾಧನೆಗಾಗಿ ಟ್ರಂಪ್ ಅವರು 2026, ಜುಲೈ 4ರ ಗಡುವು ನೀಡಿದ್ದಾರೆ.
ಟ್ರಂಪ್ ಅವರ ಎರಡನೇ ಅವಧಿಯ ಆಡಳಿತಕ್ಕೆ ಸೇರ್ಪಡೆಯಾದ ಭಾರತ ಮೂಲದ ಮೊದಲಿಗ ಎಂಬ ಗೌರವ ವಿವೇಕ್ ಅವರದ್ದಾಗಿದೆ. ವಿವೇಕ್ ಅವರ ಪೋಷಕರು ಕೇರಳದಿಂದ ಅಮೆರಿಕಕ್ಕೆ ವಲಸೆ ಹೋಗಿದ್ದರು.
‘ದಕ್ಷತೆ ಜೊತೆಗೆ ಫೆಡರಲ್ ಆಡಳಿತ ವ್ಯವಸ್ಥೆಯಲ್ಲಿ ಬದಲಾವಣೆ ಹಾಗೂ ಅಮೆರಿಕನ್ನರೆಲ್ಲರ ಉತ್ತಮ ಜೀವನಕ್ಕಾಗಿ ಎಲಾನ್ ಮಸ್ಕ್ ಮತ್ತು ವಿವೇಕ್ ತರಲಿರುವ ಬದಲಾವಣೆಗಳಿಗಾಗಿ ನಾನು ಎದುರು ನೋಡುತ್ತಿದ್ದೇನೆ’ ಎಂದು ಟ್ರಂಪ್ ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಟ್ರಂಪ್ ಅವರು, ಶ್ವೇತಭವನದ ಮಾಜಿ ಸಂಪುಟ ಕಾರ್ಯದರ್ಶಿ ಬಿಲ್ ಮಿಕ್‌ಜಿನ್ಲಿ ಅವರನ್ನು ಶ್ವೇತಭವನದ ಸಲಹೆಗಾರರನ್ನಾಗಿ ನೇಮಿಸಿರುವುದಾಗಿ ತಿಳಿಸಿದರು.
ರಾಷ್ಟ್ರೀಯ ಗುಪ್ತಚರದ ಮಾಜಿ ನಿರ್ದೇಶಕ ಜಾನ್ ರಾಟ್‌ಕ್ಲಿಫ್ ಅವರನ್ನು ಕೇಂದ್ರೀಯ ಗುಪ್ತಚರ ದಳದ ಮುಖ್ಯಸ್ಥರನ್ನಾಗಿ ಮತ್ತು ಮಾಜಿ ಗವರ್ನರ್ ಮಿಕ್ ಹುಕಬೀ ಅವರನ್ನು ಇಸ್ರೇಲ್‌ನ ರಾಯಭಾರಿಯಾಗಿ ನೇಮಿಸಿರುವುದಾಗಿ ತಿಳಿಸಿದರು.
ಮಿಕ್ ವಾಲ್ಟ್ಜ್ ಅವರನ್ನು ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಮತ್ತು ರಿಯಲ್ ಎಸ್ಟೇಟ್ ಉದ್ಯಮಿ ಸ್ಟೀವನ್ ಸಿ. ವಿಟ್‌ಕಾಫ್ ಅವರನ್ನು ಪಶ್ಚಿಮ ಏಷ್ಯಾದ ವಿಶೇಷ ರಾಯಭಾರಿಯಾಗಿ ನೇಮಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.