ADVERTISEMENT

ಗಲ್ಲು ಶಿಕ್ಷೆಗೆ ಗುರಿಯಾದ ಮಗಳು; ಭೇಟಿಯಾಗುವ ತಾಯಿಯ ಕನಸು 11 ವರ್ಷಗಳ ಬಳಿಕ ನನಸು

ಪಿಟಿಐ
Published 25 ಏಪ್ರಿಲ್ 2024, 10:50 IST
Last Updated 25 ಏಪ್ರಿಲ್ 2024, 10:50 IST
<div class="paragraphs"><p>ನಿಮಿಷಾ ಪ್ರಿಯ ಮತ್ತು&nbsp;ತಾಯಿ ಪ್ರೇಮಾ ಕುಮಾರಿ</p></div>

ನಿಮಿಷಾ ಪ್ರಿಯ ಮತ್ತು ತಾಯಿ ಪ್ರೇಮಾ ಕುಮಾರಿ

   

‌ಚಿತ್ರಕೃಪೆ: ಎಕ್ಸ್‌

ತಿರುವನಂತಪುರ: ವ್ಯಕ್ತಿಯೊಬ್ಬರ ಕೊಲೆ ಪ್ರಕರಣದಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿ ಯೆಮನ್‌ ಜೈಲಿನಲ್ಲಿರುವ ಮಗಳನ್ನು 11 ವರ್ಷದ ಬಳಿಕ ತಾಯಿ ಭೇಟಿಯಾಗಿದ್ದು, ಭಾವನಾತ್ಮಕ ಸನ್ನಿವೇಶಕ್ಕೆ ಸಾಕ್ಷಿಯಾಗಿದೆ. 

ADVERTISEMENT

ನಿಮಿಷಾ ಪ್ರಿಯ ಎನ್ನುವ ಮಹಿಳೆ ತನ್ನ ತಾಯಿ ಪ್ರೇಮಾ ಕುಮಾರಿ ಅವರನ್ನು ಏ.24ರಂದು ಭೇಟಿಯಾಗಿದ್ದಾರೆ.

ಭಾರತ ಮೂಲದ ನಿಮಿಷಾ ಪ್ರಿಯಾ ಯೆಮನ್‌ನಲ್ಲಿ ಶುಶ್ರೂಷಕಿಯಾಗಿದ್ದರು. 2017ರಲ್ಲಿ ಭಾರತಕ್ಕೆ ಮರಳಲು ತಲಾಲ್‌ ಅಬ್ದೊ ಮಹ್ದಿ ಎನ್ನುವಾತನ ವಶದಲ್ಲಿದ್ದ ತನ್ನ ಪಾಸ್‌ಪೋರ್ಟ್‌ ಪಡೆದುಕೊಳ್ಳಲು ಆತನಿಗೆ ನಿದ್ದೆಬರುವ ಚುಚ್ಚುಮದ್ದು ನೀಡಿದ್ದರು, ಆದರೆ ಚುಚ್ಚುಮದ್ದಿನಲ್ಲಿನ ಔಷಧ ಓವರ್‌ ಡೋಸ್‌ಆಗಿ ಆತ ಮೃತಪಟ್ಟಿದ್ದ. ಕೊಲೆ ಪ್ರಕರಣ ಸಾಬೀತಾದ ಹಿನ್ನೆಲೆ ನಿಮಿಷಾ ಅವರಿಗೆ ಅಲ್ಲಿನ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿತ್ತು. ಹೀಗಾಗಿ 2017ರಿಂದ ನಿಮಿಷಾ ಅವರು ಯೆಮನ್‌ ಜೈಲಿನಲ್ಲಿದ್ದಾರೆ. 

ಮಗಳನ್ನು ಭೇಟಿಯಾದ ಬಳಿಕ ವಿಡಿಯೊ ಸಂದೇಶ ಹಂಚಿಕೊಂಡ ಪ್ರೇಮಾ ಕುಮಾರಿ ಅವರು, ‘ಮಗಳನ್ನು ಮತ್ತೆ ನೋಡುತ್ತೇನೆ ಎಂದುಕೊಂಡಿರಲಿಲ್ಲ, ನನ್ನನ್ನು ನೋಡುತ್ತಿದ್ದಂತೆ ಅವಳು ಓಡಿ ಬಂದು ಅಪ್ಪಿಕೊಂಡಳು. ಅವಳ ಮದುವೆಯ ಸಂದರ್ಭದಲ್ಲಿ ನೋಡಿದ್ದೇ ಕೊನೆಯಾಗಿತ್ತು. ಅದಾದ ಬಳಿಕ ಇಲ್ಲಿಯೇ ನೋಡಿದ್ದು. ಇಬ್ಬರು ಹಲವು ಗಂಟೆ ಒಟ್ಟಿಗೆ ಕಳೆದೆವು. ಒಟ್ಟಿಗೆ ಊಟ ಮಾಡಿದೆವು. ಜೈಲಿನಲ್ಲಿ ಹಲವು ವಯಸ್ಸಾದ ಮಹಿಳೆಯರಿದ್ದಾರೆ. ನಿಮಿಷಾ ಅವರೆಲ್ಲರ ಜೀವನದ ಭಾಗವಾಗಿದ್ದಾಳೆ. ಅವರೂ ಬಂದು ನನ್ನನ್ನು ಅಪ್ಪಿಕೊಂಡರು. ದೇವರ ಆಶೀರ್ವಾದ ಮತ್ತು ಯೆಮನ್‌ ಸರ್ಕಾರದ ಕರುಣೆಯಿಂದ ನಿಮಿಷಾ ಸುರಕ್ಷಿತವಾಗಿದ್ದಾಳೆ, ಅವರಿಗೆ ನಾನು ಧನ್ಯವಾದ ಹೇಳುತ್ತೇನೆ’ ಎಂದಿದ್ದಾರೆ. 

ಗಲ್ಲು ಶಿಕ್ಷೆ ರದ್ದುಪಡಿಸುವಂತೆ ಕೋರಿದ ನಿಮಿಷಾ ಅವರ ಅರ್ಜಿಯನ್ನು ಯೆಮನ್ ಸುಪ್ರೀಂ ಕೋರ್ಟ್‌ ಕಳೆದ ನವೆಂಬರ್‌ನಲ್ಲಿ ತಿರಸ್ಕರಿಸಿತ್ತು. ಆದರೆ ಕೊನೆಯ ಆಯ್ಕೆಯಾಗಿ ಗಲ್ಲು ಶಿಕ್ಷೆಯಿಂದ ಪಾರಾಗಲು ಮೃತ ವ್ಯಕ್ತಿಯ ಕುಟುಂಬಕ್ಕೆ ಪರಿಹಾರ ಮೊತ್ತ ನೀಡಿ ಕ್ಷಮೆ ಕೇಳುವಂತೆ ಹೇಳಿತ್ತು.

ಈ ಬಗ್ಗೆ ಕಳೆದ ಡಿಸೆಂಬರ್‌ನಲ್ಲಿ ನಿಮಿಷಾ ತಾಯಿ ಪ್ರೇಮಾ ಕುಮಾರಿ ದೆಹಲಿ ಹೈಕೋರ್ಟ್‌ ಮಟ್ಟಿಲೇರಿದ್ದರು. ಪ್ರೇಮಾ ಕುಮಾರಿ ಅವರ ಮನವಿಯನ್ನು ಪುರಸ್ಕರಿಸಿದ್ದ ದೆಹಲಿ ಹೈಕೋರ್ಟ್‌, ಯೆಮನ್‌ಗೆ ತೆರಳಿ ಮೃತ ವ್ಯಕ್ತಿಯ ಕುಟುಂಬಕ್ಕೆ ಪರಿಹಾರ ಮೊತ್ತ ನೀಡಿ ಸಂಧಾನ ನಡೆಸಿ, ನಿಮಿಷಾ ಅವರನ್ನು ಗಲ್ಲು ಶಿಕ್ಷೆಯಿಂದ ಪಾರು ಮಾಡಲು ಯತ್ನಿಸುವ ಪ್ರಯತ್ನಕ್ಕೆ ಅನುಮತಿ ನೀಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.