ADVERTISEMENT

ಇಸ್ಲಾಮಿಕ್ ಸ್ಟೇಟ್ಸ್ ವಿಡಿಯೊಗಳಲ್ಲಿ ಇಂಗ್ಲಿಷ್ ವಿವರಣೆ ನೀಡಿದಾತ ಈ ಖಲೀಫ!

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2019, 9:14 IST
Last Updated 19 ಫೆಬ್ರುವರಿ 2019, 9:14 IST
   

ಸಿರಿಯಾ: ಗುಂಡಿಗೆ ಬಲಿಯಾಗಿ ಸಾಯುವ ಮುನ್ನ ತಮ್ಮ ಶವದ ಗುಂಡಿ ತೋಡುತ್ತಿರುವ ಸಿರಿಯಾದ ಯೋಧರಬಗ್ಗೆ ಇರುವ ವಿಡಿಯೊಗಳು, ಸಿರಿಯಾದ ಯೋಧರನ್ನು ಸಾಲಾಗಿ ನಿಲ್ಲಿಸಿ ಅವರಿಗೆ ಗುಂಡಿಕ್ಕಿ ಕೊಲ್ಲುತ್ತಿರುವ ವಿಡಿಯೊಗಳು ಹೀಗೆ ಇಸ್ಲಾಮಿಕ್ ಸ್ಟೇಟ್ಸ್ ಸಂಘಟನೆಗೆಹೊಸ ಸದಸ್ಯರನ್ನು ಆಕರ್ಷಿಸುವುದಕ್ಕಾಗಿ ಮಾಡುವ ವಿಡಿಯೊ, ಆಡಿಯೋಗಳಲ್ಲಿ ಇಂಗ್ಲಿಷ್‍ ವಿವರಣೆಯೊಂದನ್ನು ಕೇಳಬಹುದು.ಈ ವಿಡಿಯೊಗಳಲ್ಲಿ ಸ್ಪಷ್ಟವಾಗಿ ಅಮೆರಿಕನ್ ಇಂಗ್ಲಿಷ್‍ ಮಾತನಾಡುತ್ತಿರುವ ವ್ಯಕ್ತಿ ಯಾರು ಎಂಬುದರ ಬಗ್ಗೆ ಕಳೆದ ನಾಲ್ಕು ವರ್ಷಗಳಿಂದ ಅಮೆರಿಕದ ಫೆಡರಲ್ ತನಿಖಾ ಸಂಸ್ಥೆ ಹುಡುಕಾಟ ನಡೆಸುತ್ತಿತ್ತು.

ಇಂಗ್ಲಿಷ್ ಭಾಷೆ ಚೆನ್ನಾಗಿ ಮಾತನಾಡಬಲ್ಲ, ಚೆನ್ನಾಗಿ ಅರ್ಥ ಮಾಡಿಕೊಳ್ಳಬಲ್ಲ ಜಾಗತಿಕ ಮಟ್ಟದಲ್ಲಿ ಕೇಳುಗರನನ್ನು ಆಕರ್ಷಿಸಬಲ್ಲ ಮುಖವಾಡ ಧರಿಸಿ ಮಾತಾಡುತ್ತಿರುವ ಆ ವ್ಯಕ್ತಿ ಯಾರು ಎಂಬ ಪ್ರಶ್ನೆ ಎಲ್ಲರಲ್ಲಿಯೂ ಇತ್ತು.ಈ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ.ಆ ವಿಡಿಯೊದಲ್ಲಿರುವ ದನಿ ನನ್ನದು ಎಂದು ಹೇಳಿದ ವ್ಯಕ್ತಿಯಹೆಸರು ಮುಹಮ್ಮದ್ ಖಲೀಫ! ವಯಸ್ಸು 35.

ಚಿಕ್ಕವನಿದ್ದಾಗ ಸೌದಿ ಅರೇಬಿಯಾದಿಂದ ಕೆನಡಾಕ್ಕೆ ಹೋಗಿದ್ದ ಈತ ಟೊರೊಂಟೊದಲ್ಲಿ ಉನ್ನತ ಶಿಕ್ಷಣ ಪಡೆದ ಕೆನಡಾ ಪೌರನಾಗಿದ್ದಾನೆ.2014ರಲ್ಲಿ ಇಸ್ಲಾಮಿಕ್ ಸ್ಟೇಟ್ ಬಿಡುಗಡೆ ಮಾಡಿದ್ದ ಫ್ಲೇಮ್ಸ್ ಆಫ್ ವಾರ್ ಎಂಬ ವಿಡಿಯೊ ಚಿತ್ರೀಕರಣ ಮಾಡಿದ್ದು ಈತನೇ.ಇಸ್ಲಾಮಿಕ್ ಸ್ಟೇಟ್ಸ್ ಕೃತ್ಯಗಳ ಬಗ್ಗೆ ಆಕರ್ಷಿತನಾಗಿ ಅಲ್ಲಿನ ಮಾಧ್ಯಮ ವಿಭಾಗದಲ್ಲಿ ಕಾರ್ಯವೆಸಗಿದ್ದ ಈತ ಹಲವಾರು ಆಡಿಯೊ, ವಿಡಿಯೊ, ಬ್ರಾಡ್‍ಕಾಸ್ಟ್ ಮೂಲಕ ಐಎಸ್ ಸಂಘಟನೆಯ ವಿಚಾರಧಾರೆಯನ್ನು ಪ್ರಚಾರ ಮಾಡಿದ್ದ. ಆದರೆ ವಿಡಿಯೊದಲ್ಲಿರುವ ಆ ಯುದ್ಧಗಳಲ್ಲಿ ತಾನು ಭಾಗವಹಿಸಿಲ್ಲ ಎಂದು ಖಲೀಫ ಹೇಳಿದ್ದಾನೆ.

ADVERTISEMENT

ಸಿರಿಯಾದ ಜೈಲಿನಲ್ಲಿ ದಿನ್ಯೂಯಾರ್ಕ್ ಟೈಮ್ಸ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಖಲೀಫ, ಈ ಕೆಲಸದಲ್ಲಿ ತೊಡಗಿಸಿಕೊಂಡಿರುವುದಕ್ಕೆ ತಾನು ಪಶ್ಚಾತಾಪ ಪಡುತ್ತಿಲ್ಲ ಎಂದಿದ್ದಾನೆ.

ಸೌದಿಯಿಂದ ಕೆನಡಾಕ್ಕೆ ಬಂದ ನಂತರ ಕೆನಡಾದವರು ಮಾತನಾಡುವುದಕ್ಕಿಂತಲೂ ಹೆಚ್ಚು ಸ್ಪಷ್ಟವಾಗಿ ಇಂಗ್ಲಿಷ್ ಮಾತನಾಡಲು ಈತ ಕಲಿತಿದ್ದ.ಕಂಪ್ಯೂಟರ್ ಕೋರ್ಸ್ ಗಳನ್ನು ಕಲಿತ ನಂತರ ಕೆಲಸ ಹುಡುಕುತ್ತಿದ್ದ ವೇಳೆ ವಿಡಿಯೊಗಳನ್ನು ಕಂಡು ಇಸ್ಲಾಮಿಕ್ ಸ್ಟೇಟ್‍ ಸಂಘಟನೆಗೆ ಸೇರುವುದಕ್ಕಾಗಿ ಈತ ಸಿರಿಯಾಗೆ ಬಂದಿದ್ದನು.

ಖಲೀಫ ಇಂಗ್ಲಿಷ್‍ನಲ್ಲಿ ವಿವರಣೆ ನೀಡುತ್ತಿರುವ ವಿಡಿಯೊಗಳು ಜಗತ್ತಿನಲ್ಲಿ ಉಂಟುಮಾಡಿದ ಸಂಚಲನ ಬಗ್ಗೆ ತಜ್ಞರು ಅಧ್ಯಯನ ನಡೆಸುತ್ತಿದ್ದಾರೆ.ಇಸ್ಲಾಮಿಕ್ ಸ್ಟೇಟ್ಸ್ ವಿಡಿಯೊಗಳನ್ನು ಇಡೀ ಜಗತ್ತೇ ಗಮನಿಸುವಂತೆ ಮಾಡಿದ ವಿಡಿಯೊಗಳಲ್ಲಿರುವ ದನಿ ಖಲೀಫನದ್ದೇ ಎಂದು ಪ್ರಾಥಮಿಕ ದನಿ ಪರಿಶೋಧನೆಯಲ್ಲಿ ತಿಳಿದುಬಂದಿದೆ.

ಈ ಬಗ್ಗೆ ದಿ ಟೈಮ್ಸ್ ನಡೆಸಿದ ಪರಿಶೋಧನೆಯಲ್ಲಿಯೂ ವಿಡಿಯೊದಲ್ಲಿರುವ ದನಿ ಖಲೀಫನದ್ದೇ ಎಂದು ಹೇಳಲಾಗಿದೆ.

ಸಿರಿಯಾದ ಉತ್ತರ ಭಾಗದಲ್ಲಿರುವ 50ರಷ್ಟು ದೇಶಗಳಿಂದ ಬಂದ ಐಎಸ್ ಉಗ್ರರನ್ನು ಬಂಧಿಸಿರುವ ಸಿರಿಯಾದ ಜೈಲಿನಲ್ಲಿದ್ದಾನೆ ಖಲೀಫ.ತನಗೆ ಪತ್ನಿ ಮತ್ತು ಇಬ್ಬರು ಮಕ್ಕಳಿದ್ದಾರೆ ಎಂದು ಹೇಳುವ ಖಲೀಫ ಅವರು ಎಲ್ಲಿದ್ದಾರೆ ಎಂಬುದರ ಬಗ್ಗೆ ಹೇಳಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.