ವಿಶ್ವಸಂಸ್ಥೆ: ‘2019ರಲ್ಲಿ ವಿಶ್ವದಲ್ಲಿ 93.1 ಕೋಟಿ ಟನ್ ಆಹಾರ ವ್ಯರ್ಥವಾಗಿದೆ. ಆ ವರ್ಷ ಭಾರತದಲ್ಲಿ 6.87 ಕೋಟಿ ಟನ್ ಮನೆಯ ಆಹಾರ ವ್ಯರ್ಥವಾಗಿದೆ’ ಎಂದು ವಿಶ್ವಸಂಸ್ಥೆಯ ವರದಿ ಹೇಳಿದೆ.
‘2019ರಲ್ಲಿ ವಿಶ್ವದಲ್ಲಿ 93.1 ಕೋಟಿ ಟನ್ ಆಹಾರ ತ್ಯಾಜ್ಯ ಉತ್ಪತ್ತಿಯಾಗಿದೆ. ಇದರಲ್ಲಿ ಶೇಕಡ 61ರಷ್ಟು ಭಾಗ ಮನೆಯ ಆಹಾರವಾಗಿದ್ದು, ಶೇಕಡ 13 ರಷ್ಟು ಭಾಗ ಚಿಲ್ಲರೆ ವ್ಯಾಪಾರದ್ದಾಗಿದೆ’ ಎಂದು ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ(ಯುಎನ್ಇಪಿ) ಮತ್ತು ಡಬ್ಲ್ಯೂಆರ್‌ಪಿಎಫ್‌ನ 2021ರ ಆಹಾರ ತ್ಯಾಜ್ಯ ಸೂಚ್ಯಂಕ ವರದಿಯಲ್ಲಿ ತಿಳಿದುಬಂದಿದೆ.
‘ಇದರಲ್ಲಿ ಜಾಗತಿಕ ಆಹಾರ ಉತ್ಪಾದನೆಯಲ್ಲಿ ಶೇಕಡ 17ರಷ್ಟು ವ್ಯರ್ಥವಾಗಬಹುದು. ಭಾರತದಲ್ಲಿ ವರ್ಷಕ್ಕೆ ಅಂದಾಜು ಪ್ರತಿಯೊಂದು ಮನೆಯಲ್ಲಿ 50 ಕೆ.ಜಿಯಷ್ಟು ಆಹಾರ ಹಾಳಾಗುತ್ತಿದೆ. ಅಮೆರಿಕದಲ್ಲಿ 69 ಕೆ.ಜಿ ಮತ್ತು ಚೀನಾದಲ್ಲಿ 64 ಕೆ.ಜಿ ಆಹಾರ ವ್ಯರ್ಥವಾಗುತ್ತಿದೆ’ ಎಂದು ವರದಿ ಹೇಳಿದೆ.
‘ಈ ತ್ಯಾಜ್ಯಗಳಲ್ಲಿ ತಿನ್ನಲಾಗದ ಎಲುಬು, ಚಿಪ್ಪುಗಳು ಸೇರಿವೆ. ವಿಶ್ವದಲ್ಲಿ ಅತಿ ಹೆಚ್ಚು ಮನೆಯ ಊಟ ವ್ಯರ್ಥವಾಗುತ್ತಿದೆ. ಆಹಾರ ಸೇವೆಗಳು ಮತ್ತು ಚಿಲ್ಲರೆ ವ್ಯಾಪಾರಗಳಲ್ಲಿ ಕ್ರಮವಾಗಿ ಶೇಕಡ 5 ಮತ್ತು 2ರಷ್ಟು ಆಹಾರ ವ್ಯರ್ಥ ಮಾಡಲಾಗುತ್ತಿದೆ.
‘ಹವಾಮಾನ ಬದಲಾವಣೆ, ಮಾಲಿನ್ಯದಂತಹ ಸಮಸ್ಯೆಗಳನ್ನು ಬಗೆಹರಿಸಬೇಕಾದರೆ ಸರ್ಕಾರ ಮತ್ತು ನಾಗರಿಕರು ಆಹಾರ ತ್ಯಾಜ್ಯವನ್ನು ಕಡಿಮೆ ಮಾಡಬೇಕು’ ಎಂದು ಯುಎನ್ಇಪಿ ಕಾರ್ಯನಿರ್ವಾಹಕ ನಿರ್ದೇಶಕ ಇಂಗರ್ ಆಂಡರ್ಸನ್ ಹೇಳಿದರು.
‘2019ರಲ್ಲಿ 69 ಕೋಟಿ ಜನರು ಹಸುವಿನಿಂದ ಬಳಲುತ್ತಿದ್ದರು. ಇದೀಗ ಕೋವಿಡ್‌ನಿಂದಾಗಿ ಈ ಸಂಖ್ಯೆಯಲ್ಲಿ ಏರಿಕೆಯಾಗುವ ಸಾಧ್ಯತೆಯಿದೆ. 300 ಕೋಟಿ ಜನರಿಗೆ ಪೌಷ್ಟಿಕ ಆಹಾರ ಸಿಗುತ್ತಿಲ್ಲ. ಹಾಗಾಗಿ ಜನರು ಆಹಾರವನ್ನು ವ್ಯರ್ಥ ಮಾಡಬಾರದು’ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.