ನವದೆಹಲಿ:ಸಾರ್ಕ್ (ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘಟನೆ) ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಅವರನ್ನು ಪಾಕಿಸ್ತಾನಕ್ಕೆ ಆಹ್ವಾನಿಸಲಾಗುವುದು ಎಂದು ಅಲ್ಲಿನ ವಿದೇಶಾಂಗ ಇಲಾಖೆ ವಕ್ತಾರ ಡಾ. ಮೊಹಮ್ಮದ್ ಫೈಸಲ್ ಹೇಳಿದ್ದಾರೆ.
ಇಸ್ಲಾಮಾಬಾದ್‌ನಲ್ಲಿ ಸಮಾವೇಶವೊಂದರಲ್ಲಿ ಫೈಸಲ್ ಈ ಮಾಹಿತಿ ನೀಡಿದ್ದಾರೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ. ಕರ್ತಾರಪುರ ಕಾರಿಡಾರ್ ಸಮಾರಂಭಕ್ಕೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಮತ್ತು ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧು ಅವರಿಗೆ ಆಹ್ವಾನ ನೀಡಿದ ಬೆನ್ನಲ್ಲೇ ಫೈಸಲ್ ಅವರು ಮೋದಿಗೆ ಆಹ್ವಾನ ನೀಡುವ ಹೇಳಿಕೆ ನೀಡಿದ್ದಾರೆ.
ಕರ್ತಾರಪುರ ಕಾರಿಡಾರ್ ಕಾಮಗಾರಿಗೆ ಪಾಕಿಸ್ತಾನದ ಕಡೆಯಿಂದ ಅಲ್ಲಿನಪ್ರಧಾನಿ ಇಮ್ರಾನ್ ಖಾನ್ ಬುಧವಾರ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಅಮರಿಂದರ್ ಸಿಂಗ್ ಮತ್ತು ಸಿಧು ಭಾಗಿಯಾಗುವ ಸಾಧ್ಯತೆ ಇದೆ. ಗುರು ನಾನಕ್ ಅವರ 550ನೇ ಜನ್ಮ ವರ್ಷಾಚರಣೆ ಹಿನ್ನೆಲೆಯಲ್ಲಿಭಾರತ–ಪಾಕಿಸ್ತಾನದ ಗಡಿ ಬಳಿ ಪಾಕ್ ನೆಲದಲ್ಲಿರುವ ಸಿಖ್ಖರ ಪುಣ್ಯಕ್ಷೇತ್ರ ಕರ್ತಾರಪುರ ದರ್ಬಾರ್ ಸಾಹಿಬ್ ಗುರುದ್ವಾರಕ್ಕೆ ಎರಡೂ ಕಡೆಯಿಂದ ಕಾರಿಡಾರ್ ನಿರ್ಮಿಸಲು ಉಭಯ ದೇಶಗಳು ಈಗಾಗಲೇ ಒಪ್ಪಿಗೆ ಸೂಚಿಸಿವೆ.
ಇದನ್ನೂ ಓದಿ:ಕರ್ತಾರಪುರ ಕಾರಿಡಾರ್ಗೆ ಭಾರತ–ಪಾಕ್ ಒಪ್ಪಿಗೆ
2016ರ ಸಾರ್ಕ್ ಶೃಂಗ ಸಭೆ ಇಸ್ಲಾಮಾಬಾದ್‌ನಲ್ಲಿ ನಡೆಯಬೇಕಿತ್ತು. ಆದರೆ, ಅದೇ ವರ್ಷ ಸೆಪ್ಟೆಂಬರ್‌ನಲ್ಲಿ
ಜಮ್ಮು ಮತ್ತು ಕಾಶ್ಮೀರದ ಉರಿ ಸೇನಾ ಶಿಬಿರದ ಮೇಲೆ ಪಾಕಿಸ್ತಾನದ ಉಗ್ರರಿಂದ ಭೀಕರ ದಾಳಿ ನಡೆದಿತ್ತು. ಹಾಗಾಗಿ, ‘ಇಂತಹ ಸನ್ನಿವೇಶ’ದಲ್ಲಿ ಪಾಕಿಸ್ತಾನದಲ್ಲಿ ನಡೆಯುವ ಸಾರ್ಕ್ ಶೃಂಗ ಸಭೆಯಲ್ಲಿ ಭಾಗವಹಿಸಲು ಸಾಧ್ಯವಿಲ್ಲ ಎಂದು ಭಾರತ ಹೇಳಿತ್ತು.ನಂತರ ಈವರೆಗೆ ಭಾರತದ ಯಾವ ಸಚಿವರೂ ಪಾಕಿಸ್ತಾನಕ್ಕೆ ಭೇಟಿ ನೀಡಿಲ್ಲ. ಉರಿಯಲ್ಲಿ ನಡೆದಿದ್ದ ಉಗ್ರ ದಾಳಿ ಉಭಯ ರಾಷ್ಟ್ರಗಳ ನಡುವಣ ದ್ವಿಪಕ್ಷೀಯ ಬಾಂಧವ್ಯಕ್ಕೆ ಧಕ್ಕೆಯುಂಟುಮಾಡಿತ್ತು. ಉರಿ ದಾಳಿಯ ನಂತರ ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಪ್ರದೇಶದಲ್ಲಿ ಭಾರತೀಯ ಸೇನೆ ನಿರ್ದಿಷ್ಟ ದಾಳಿ ನಡೆಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.