ADVERTISEMENT

ಬ್ರಿಟನ್‌ ವಿರೋಧ ಪಕ್ಷದ ನಾಯಕತ್ವ: ಪ್ರೀತಿ ಪಟೇಲ್‌ ಸ್ಪರ್ಧಿಸುವ ಸಾಧ್ಯತೆ

ಪಿಟಿಐ
Published 17 ಜುಲೈ 2024, 14:49 IST
Last Updated 17 ಜುಲೈ 2024, 14:49 IST
ಪ್ರೀತಿ ಪಟೇಲ್‌
ಪ್ರೀತಿ ಪಟೇಲ್‌   

ಲಂಡನ್‌ : ಬ್ರಿಟನ್‌ನ ಮಾಜಿ ಗೃಹ ಕಾರ್ಯದರ್ಶಿ ಪ್ರೀತಿ ಪಟೇಲ್‌ ಅವರು ಹೌಸ್‌ ಆಫ್‌ ಕಾಮನ್ಸ್‌ನಲ್ಲಿ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಸ್ಪರ್ಧಿಸುವ ಸಾಧ್ಯತೆಯಿದೆ. ಈ ಮೂಲಕ ಅವರು ಕನ್ಸರ್ವೇಟಿವ್‌ ಪಕ್ಷದಲ್ಲಿ ರಿಷಿ ಸುನಕ್‌ ಅವರ ಉತ್ತರಾಧಿಕಾರಿಯಾಗಲು ಯತ್ನಿಸುತ್ತಿದ್ದಾರೆ.

ಎಸ್ಸೆಕ್ಸ್‌ನ ವಿಥಮ್‌ ಕ್ಷೇತ್ರದಲ್ಲಿ ಜಯ ಸಾಧಿಸಿ ಸಂಸತ್ತಿನ ಸದಸ್ಯರಾಗಿರುವ 52 ವರ್ಷದ ಪ್ರೀತಿ ಪಟೇಲ್‌ ಅವರು ಭಾರತೀಯ ಮೂಲದವರು.

ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಲೇಬರ್‌ ಪಕ್ಷ ಪ್ರಚಂಡ ಜಯ ಸಾಧಿಸಿದ ಬೆನ್ನಲ್ಲೇ, 44 ವರ್ಷದ ಸುನಕ್‌ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಸದ್ಯಕ್ಕೆ ಸುನಕ್‌ ಅವರು ವಿರೋಧ ಪಕ್ಷದ ಹಂಗಾಮಿ ನಾಯಕರಾಗಿದ್ದಾರೆ.

ADVERTISEMENT

ಪ್ರೀತಿ ಅವರ ಪೋಷಕರು ಗುಜರಾತಿ ಮತ್ತು ಉಗಾಂಡಾ ಮೂಲದವರು. ಅವರು ಥೆರೆಸಾ ಮೇ ಮತ್ತು ಬೋರಿಸ್‌ ಜಾನ್ಸನ್‌ ಅವರ ಸಂಪುಟದಲ್ಲಿ ಅಂತರರಾಷ್ಟ್ರೀಯ ಅಭಿವೃದ್ದಿ ಕಾರ್ಯದರ್ಶಿ ಮತ್ತು ಗೃಹ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಅವರು ರಿಷಿ ಸುನಕ್‌ ಅವರ ಸರ್ಕಾರದ ತೆರಿಗೆ ನೀತಿಗಳ ವಿರುದ್ಧ ಆಗಾಗ್ಗೆ ಟೀಕೆಗಳನ್ನು ಮಾಡುತ್ತಿದ್ದರು.

ಪ್ರೀತಿ ಅವರು ಈ ಸ್ಥಾನಕ್ಕೆ ಸ್ಪರ್ಧಿಸಿದರೆ, ಅವರು ಭಾರತೀಯ ಮೂಲದ ಸಹೋದ್ಯೋಗಿ ಸುಯೆಲ್ಲಾ ಬ್ರೇವರ್‌ಮನ್‌ ಮತ್ತು ರಾಬರ್ಟ್‌ ಜೆನ್ರಿಕ್‌ ಸೇರಿದಂತೆ ಇತರ ನಾಯಕರಿಂದ ಸ್ಪರ್ಧೆ ಎದುರಿಸಬೇಕಾಗುವ ಸಾಧ್ಯತೆಗಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.