ADVERTISEMENT

ಪಾಕಿಸ್ತಾನ ಚುನಾವಣಾ ಅಕ್ರಮ: ಆಯುಕ್ತರ ರಾಜೀನಾಮೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 23 ಜೂನ್ 2024, 16:24 IST
Last Updated 23 ಜೂನ್ 2024, 16:24 IST
<div class="paragraphs"><p>ಪಾಕಿಸ್ತಾನ</p></div>

ಪಾಕಿಸ್ತಾನ

   

ಇಸ್ಲಾಮಾಬಾದ್: ಚುನಾವಣಾ ಅಕ್ರಮಗಳ ಆರೋಪಗಳ ಹಿನ್ನೆಲೆಯಲ್ಲಿ ಮುಖ್ಯ ಚುನಾವಣಾ ಆಯುಕ್ತ ಸಿಕಂದರ್ ಸುಲ್ತಾನ್‌ ರಾಜಾ ತಕ್ಷಣವೇ ರಾಜೀನಾಮೆ ನೀಡಬೇಕು ಎಂಬ ಬೇಡಿಕೆಯನ್ನು ಪಾಕಿಸ್ತಾನ್‌ ತೆಹ್ರೀಕ್‌ ಇ ಇನ್ಸಾಫ್‌ (ಪಿಟಿಐ) ಪಕ್ಷ ಆಗ್ರಹಿಸಿದೆ.

ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ನೇತೃತ್ವದ ಪಿಟಿಐ ಪಕ್ಷದ ಮುಖಂಡರು, ರಾಷ್ಟ್ರೀಯ ಅಸೆಂಬ್ಲಿ ಸದಸ್ಯರು ಭಾನುವಾರ, ಸಿಇಸಿ ರಾಜೀನಾಮೆಗೆ ಆಗ್ರಹಪಡಿಸಿ ಸಂಸತ್‌ ಆವರಣದಿಂದ ಆಯೋಗದ ಕಚೇರಿಯವರೆಗೂ ಪ್ರತಿಭಟನಾ ಜಾಥಾ ನಡೆಸಿದರು. 

ADVERTISEMENT

ಪ್ರತಿಪಕ್ಷದ ನಯಕ ಒಮರ್ ಅಯೂಬ್ ನೇತೃತ್ವ ವಹಿಸಿದ್ದರು. ಫೆಬ್ರುವರಿಯಲ್ಲಿ ನಡೆದಿದ್ದ ಸಾರ್ವತ್ರಿಕ ಚುನಾವಣೆಯಲ್ಲಿ ಭಾರಿ ಅಕ್ರಮ ನಡೆದಿದೆ ಎಂದು ವಿ‌ಪಕ್ಷಗಳು ಆರೋಪಿಸಿವೆ.

ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸುವುದು ಆಯೋಗದ ಹೊಣೆಗಾರಿಕೆ. ಆದರೆ, ಆಯೋಗ ಇದರಲ್ಲಿ ವಿಫಲವಾಗಿದೆ ಎಂದು ಪ್ರತಿಭಟನಕಾರರು ಟೀಕಿಸಿದರು ಎಂದು ‘ದ ನ್ಯೂಸ್ ಇಂಟರ್‌ನ್ಯಾಷನಲ್‌’ ದೈನಿಕ ವರದಿ ಮಾಡಿದೆ.

ಇದೇ ಸಂದರ್ಭದಲ್ಲಿ ಪ್ರತಿಭಟನಕಾರರು, ಬಂಧನದಲ್ಲಿರುವ ಇಮ್ರಾನ್‌ ಖಾನ್‌ ಬಿಡುಗಡೆಗೆ ಆಗ್ರಹಪಡಿಸಿ ಘೋಷಣೆ ಕೂಗಿದರು. ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧಿತರಾಗಿರುವ ಇಮ್ರಾನ್ ಖಾನ್‌, ಕಳೆದ ವರ್ಷ ಸೆಪ್ಟೆಂಬರ್‌ನಿಂದ ರಾವಲ್ಪಿಂಡಿಯ ಜೈಲಿನಲ್ಲಿ ಇದ್ದಾರೆ.

ಪಿಟಿಐ ಅಧ್ಯಕ್ಷ ಬ್ಯಾರಿಸ್ಟರ್‌ ಗೋಹರ್ ಖಾನ್ ಅವರು, ‘ವಿರೋಧ ಪಕ್ಷಗಳ ನಾಯಕರಿಗೆ ಕೋರ್ಟ್‌ಗಳ ಬಾಗಿಲುಗಳು ಮುಚ್ಚಿವೆ. ನಮ್ಮ ಮಹಿಳೆಯರು ಜೈಲಿನಲ್ಲಿ ಇದ್ದಾರೆ. ಇತಿಹಾಸ ಎಂದಿಗೂ ಈ ಸಂಗತಿಗಳನ್ನು ನೆನಪಿನಲ್ಲಿ ಇಡಲಿದೆ’ ಎಂದು ಕಿಡಿಕಾರಿದರು.

ಫೆಬ್ರುವರಿಯಲ್ಲಿ ನಡೆದಿದ್ದ ಸಾರ್ವತ್ರಿಕ ಚುನಾವಣೆಯಲ್ಲಿ, ಒಟ್ಟು 265 ಸದಸ್ಯ ಬಲದ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಪಿಟಿಐ 93 ಸ್ಥಾನಗಳನ್ನು ಗೆದ್ದುಕೊಂಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.