ADVERTISEMENT

ಬಾಂಗ್ಲಾದೇಶ | ಕಂಟೇನರ್ ಡಿಪೋದಲ್ಲಿ ಸ್ಫೋಟ; 35 ಮಂದಿ ಸಾವು, 450 ಜನರಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 5 ಜೂನ್ 2022, 6:48 IST
Last Updated 5 ಜೂನ್ 2022, 6:48 IST
ಬಾಂಗ್ಲಾದೇಶದ ಕಂಟೇನರ್‌ ಡಿಪೋ ಚಿತ್ರ
ಬಾಂಗ್ಲಾದೇಶದ ಕಂಟೇನರ್‌ ಡಿಪೋ ಚಿತ್ರ   

ಢಾಕಾ: ಬಾಂಗ್ಲಾದೇಶದ ಖಾಸಗಿ ಕಂಟೇನರ್‌ ಡಿಪೋ ಒಂದರಲ್ಲಿ ಭಾರಿ ಸ್ಫೋಟ ಸಂಭವಿಸಿದ್ದು ಕನಿಷ್ಠ 35 ಮಂದಿ ಮೃತಪಟ್ಟು, 450ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

ಚಿತ್ತಗಾಂವ್‌ನಸೀತಾಕುಂದ ಉಪಾಜಿಲ ಆಡಳಿತ ವಿಭಾಗದ ಕದಮ್‌ರಸೂಲ್‌ ಪ್ರದೇಶದಲ್ಲಿರುವ 'ಬಿಎಂ ಕಂಟೇನರ್ ಡಿಪೋ'ದಲ್ಲಿಶನಿವಾರ ರಾತ್ರಿ 9ಕ್ಕೆ ಬೆಂಕಿ ಕಾಣಿಸಿಕೊಂಡಿದೆ.

ಅಗ್ನಿ ಅವಘಡದಲ್ಲಿ ಕನಿಷ್ಠ 35 ಮಂದಿ ಮೃತಪಟ್ಟಿದ್ದಾರೆ. ರಾತ್ರಿ 11.45ರ ಸುಮಾರಿಗೆ ಭಾರಿ ಸ್ಫೋಟ ಸಂಭವಿಸಿದೆ. ಕಂಟೇನರ್‌ನಲ್ಲಿ ಕೆಮಿಕಲ್‌ ಇದ್ದಿದ್ದರಿಂದ ಒಂದರಿಂದ ಮತ್ತೊಂದಕ್ಕೆ ಬೆಂಕಿ ಹೊತ್ತಿಕೊಂಡು, ಸುತ್ತಲೂ ಆವರಿಸಿದೆ. ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಸೇರಿದಂತೆ ನೂರಾರು ಮಂದಿ ಗಾಯಗೊಂಡಿದ್ದಾರೆ ಎಂದು 'ದಿ ಡೈಲಿ ಸ್ಟಾರ್‌' ವರದಿ ಮಾಡಿದೆ.

ADVERTISEMENT

'450ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಕನಿಷ್ಠ 350 ಜನರನ್ನು ಚಿತ್ತಗಾಂವ್‌ ಮೆಡಿಕಲ್‌ ಕಾಲೇಜು ಆಸ್ಪತ್ರೆಗೆ (CMCH) ದಾಖಲಿಸಲಾಗಿದೆ. ಬೇರೆ ಆಸ್ಪತ್ರೆಗಳಲ್ಲಿ ಸಾವಿನ ಸಂಖ್ಯೆ ಹೆಚ್ಚಾಗಿರಬಹುದು' ಎಂದು ಚಿತ್ತಗಾಂವ್‌ನ 'ರೆಡ್‌ ಕ್ರೆಸೆಂಟ್‌ ಯೂತ್‌' ಎನ್‌ಜಿಒದ ಆರೋಗ್ಯ ಮತ್ತು ಸೇವೆ ವಿಭಾಗದ ಮುಖ್ಯಸ್ಥ ಇಸ್ತಾಕುಲ್‌ ಇಸ್ಲಾಂ ಹೇಳಿರುವುದಾಗಿ 'ಢಾಕಾ ಟ್ರಿಬ್ಯೂನ್‌' ಉಲ್ಲೇಖಿಸಿದೆ.

ಅಗ್ನಿಶಾಮಕ ಸೇವೆ ಮೂಲಗಳ ಪ್ರಕಾರ ಮೂವರು ಸಿಬ್ಬಂದಿಯೂ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಮೃತರ ಗುರುತು ಇನ್ನೂ ಪತ್ತೆಯಾಗಿಲ್ಲ.ಸ್ಫೋಟವು ನೆರೆಹೊರೆಯವರನ್ನು ಬೆಚ್ಚಿಬೀಳಿಸಿದ್ದು, ಡಿಪೋ ಸಮೀಪದ ಮನೆಗಳಿಗೂ ಹಾನಿಯಾಗಿರುವುದಾಗಿ ವರದಿಗಳು ಪ್ರಕಟವಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.