ADVERTISEMENT

ಕ್ಯೂಬಾ ಐಷಾರಾಮಿ ಹೋಟೆಲ್‌ನಲ್ಲಿ ಅಗ್ನಿ ಅವಘಡ: 22 ಮಂದಿ ಸಾವು

ನೈಸರ್ಗಿಕ ಅನಿಲ ಸೋರಿಕೆಯಿಂದ ಸ್ಫೋಟ

ಏಜೆನ್ಸೀಸ್
Published 7 ಮೇ 2022, 11:35 IST
Last Updated 7 ಮೇ 2022, 11:35 IST
ಸ್ಫೋಟ ಸಂಭವಿಸಿದ ಸಾರಟೋಗ ಹೋಟೆಲ್‌ನಲ್ಲಿ ಸಿಲುಕಿರುವವರ ರಕ್ಷಣಾ ಕಾರ್ಯಾಚರಣೆ  –ಎಎಫ್‌ಪಿ ಚಿತ್ರ
ಸ್ಫೋಟ ಸಂಭವಿಸಿದ ಸಾರಟೋಗ ಹೋಟೆಲ್‌ನಲ್ಲಿ ಸಿಲುಕಿರುವವರ ರಕ್ಷಣಾ ಕಾರ್ಯಾಚರಣೆ  –ಎಎಫ್‌ಪಿ ಚಿತ್ರ   

ಹವಾನಾ (ಕ್ಯೂಬಾ):ಕ್ಯೂಬಾ ರಾಜಧಾನಿ ಹವಾನಾದ ಹೃದಯ ಭಾಗದಲ್ಲಿರುವ ಐಷಾರಾಮಿ ಹೋಟೆಲ್‌ ಒಂದರಲ್ಲಿ ಶುಕ್ರವಾರ ನೈಸರ್ಗಿಕ ಅನಿಲ ಸೋರಿಕೆಯಿಂದ ಉಂಟಾದ ಸ್ಫೋಟದ ಪರಿಣಾಮ ಮಗು ಸೇರಿದಂತೆ ಕನಿಷ್ಠ 22 ಜನರು ದಾರುಣವಾಗಿ ಸತ್ತಿದ್ದಾರೆ.

ಸಾರಟೋಗ ಹೋಟೆಲ್‌ನಲ್ಲಿ ಈ ಅಗ್ನಿ ಅವಘಡ ಸಂಭವಿಸಿದ್ದು, ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ.ದುರಂತ ನಡೆದ ಸ್ಥಳದಲ್ಲಿ ಇನ್ನೂ ಹಲವರು ಸಿಲುಕಿರುವ ಶಂಕೆ ಇದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.

‘ಹೋಟೆಲ್‌ನ ನಂ.96 ಕೊಠಡಿಯು ನವೀಕರಣ ಹಂತದಲ್ಲಿತ್ತು. ಅಲ್ಲಿ ಯಾವುದೇ ಪ್ರವಾಸಿಗರು ತಂಗಿರಲಿಲ್ಲ. ಹೀಗಾಗಿ ದೊಡ್ಡ ಅನಾಹುತವೊಂದು ತಪ್ಪಿದೆ’ ಎಂದು ಹವಾನ ಗವರ್ನರ್‌ ರೆನಾಲ್ಡೋ ಗಾರ್ಸಿಯಾ ಜಪಾಟಾ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

ADVERTISEMENT

ಸ್ಥಳಕ್ಕೆ ಭೇಟಿ ನೀಡಿದಅಧ್ಯಕ್ಷ ಮಿಗ್ಯುಯೆಲ್‌ ದಿಯಾಜ್‌–ಕ್ಯಾನೆಲ್‌, ‘ಇದು ಬಾಂಬ್‌ ಅಥವಾ ದಾಳಿ ಅಲ್ಲ. ಇದೊಂದು ದುರಂತ. ಸ್ಫೋಟದ ಪರಿಣಾಮ ಹಾನಿಗೊಳಗಾದ ಹೋಟೆಲ್‌ ಪಕ್ಕ ಕಟ್ಟಡಗಳ ನಿವಾಸಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ’ ಎಂದು ಟ್ವೀಟ್‌ ಮಾಡಿದ್ದಾರೆ.

ಐಷಾರಾಮಿ ಹೋಟೆಲ್‌ ಸಾರಟೋಗ ಅಮೆರಿಕ ಸರ್ಕಾರದ ಉನ್ನತ ನಿಯೋಗಗಳ ಗಣ್ಯಾತಿಗಣ್ಯತರು, ರಾಜಕಾರಣಿಗಳ ಆತಿಥ್ಯಕ್ಕೆ ಬಳಕೆಯಾಗುತ್ತಿತ್ತು. ದ್ವೀಪ ರಾಷ್ಟ್ರ ಕ್ಯೂಬಾ, ಕೊರೊನಾ ಸಾಂಕ್ರಾಮಿಕದಿಂದ ತತ್ತರಿಸಿರುವ ಪ್ರವಾಸೋದ್ಯಮ ವಲಯದ ಚೇತರಿಕೆಗೆ ಪ್ರಯತ್ನಿಸುತ್ತಿರುವಾಗಲೇ ಈ ದುರ್ಘಟನೆ ಸಂಭವಿಸಿದ್ದು, ದೇಶದ ಆರ್ಥಿಕತೆಗೆ ದೊಡ್ಡ ನಷ್ಟ ಎಂದು ಹೇಳಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.