ಕಾಂಗೊ; ಧರೆಯ ಸೋಜಿಗದ ಪ್ರಾಣಿ ಗೊರಿಲ್ಲಾಮನುಷ್ಯರೊಂದಿಗೆ ಬಹುಬೇಗ ಬೆರೆಯುತ್ತದೆ. ಅವು ನೋಡಲು ಭಯಾನಕವಾಗಿದ್ದರೂ ಅವುಗಳ ಮನಸ್ಸು ಮಾತ್ರ ಮಗುವಿನಂತೆ ಕೋಮಲ ಎಂಬುದು ಅನೇಕ ಸಾರಿ ಜಗಜ್ಜಾಹೀರಾಗಿದೆ.
2019 ರಲ್ಲಿ ಅರಣ್ಯ ಅಧಿಕಾರಿಯೊಬ್ಬರಿಗೆ ಸೆಲ್ಫಿ ಪೋಸ್ ಕೊಟ್ಟು ಜಗತ್ತಿನಾದ್ಯಂತ ವೈರಲ್ ಆಗಿದ್ದ ಕಾಂಗೊದ ಪರ್ವತ ವಾಸಿ ಗೊರಿಲ್ಲಾ ಕಳೆದ ಗುರುವಾರ ಪ್ರಾಣ ಬಿಟ್ಟಿದೆ. ಕಾಂಗೊದ ವಿರುಂಗಾ ನ್ಯಾಷನಲ್ ಪಾರ್ಕ್‌ನ ವ್ಯಾಪ್ತಿಯಲ್ಲಿ ವಾಸಿಸುತ್ತಿದ್ದ 'ಎನ್ಡಕಾಸಿ' ಎಂಬ ಹೆಣ್ಣು ಗೊರಿಲ್ಲಾ ತಾನು ಸಾಯುವ ಘಳಿಗೆಯಲ್ಲಿ ತನ್ನ ಕೇರ್ ಟೇಕರ್ ನ ಮಡಿಲಲ್ಲಿ ಅಳುತ್ತಾ ಪ್ರಾಣ ಬಿಟ್ಟಿದೆ.
ಕಾಂಗೊದ ವಿರುಂಗಾ ನ್ಯಾಷನಲ್ ಪಾರ್ಕ್ ಈ ವಿಚಾರವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಫೋಟೊ ವೈರಲ್ ಆಗಿದೆ. ತನ್ನ ಕೇರ್ ಟೇಕರ್ ‘ಆಂಡ್ರೆ ಬೂಮಾ‘ ಅವರ ತೋಳುಗಳನ್ನು ಬಿಗಿದಪ್ಪಿ ಎನ್ಡಕಾಸಿ ಪ್ರಾಣ ಬಿಟ್ಟಿದೆ. ಅದುಇತ್ತೀಚೆಗೆ ಅನಾರೋಗ್ಯದಿಂದ ಬಳಲುತ್ತಿತ್ತು ಎಂದು ಪಾರ್ಕ್ ಪ್ರಕಟಣೆ ತಿಳಿಸಿದೆ.
'ಹಲವು ದಶಕಗಳ ಕಾಲ ನಮ್ಮೊಂದಿಗೆ ಇದ್ದ ಎನ್ಡಕಾಸಿ ನಮ್ಮನ್ನು ಅಗಲಿರುವುದು ನಮಗೆ ಇನ್ನಿಲ್ಲದ ನೋವು ತರಿಸಿದೆ' ಎಂದು ವಿರುಂಗಾ ನ್ಯಾಷನಲ್ ಪಾರ್ಕ್ ಇನ್ಸ್ಟಾಗ್ರಾಂ ನಲ್ಲಿ ಶೋಕ ವ್ಯಕ್ತಪಡಿಸಿದೆ.
2007 ರಲ್ಲಿ ತನ್ನ ತಾಯಿ ಗೊರಿಲ್ಲ ಸತ್ತು ಬಿದ್ದಾಗ ಅದರ ಬಳಿ ಅಳುತ್ತಿದ್ದ ಎನ್ಡಕಾಸಿಯನ್ನು ಪಾರ್ಕ್ ಕೇರ್ ಟೇಕರ್ ಅಂಡ್ರೆ ಬೂಮಾ 14 ವರ್ಷಗಳ ಕಾಲ ಮಗುವಿನಂತೆ ನೋಡಿಕೊಂಡಿದ್ದರು. 2019 ರಲ್ಲಿ ಅರಣ್ಯ ಅಧಿಕಾರಿಯೊಬ್ಬರ ಸೆಲ್ಫಿಗೆ ಪೋಸ್ ನೀಡಿದ್ದ ಎನ್ಡಕಾಸಿ ಜನಪ್ರಿಯವಾಗಿತ್ತು. ಅಲ್ಲದೇ ಈ ಕುರಿತು ಸಾಕ್ಷ್ಯಚಿತ್ರ ಕೂಡ ಮೂಡಿಬಂದಿತ್ತು.
ಪಾರ್ಕ್ ನ ಹೇಳಿಕೆಯಲ್ಲಿ ತನ್ನ ದುಃಖವನ್ನು ಹಂಚಿಕೊಂಡಿರುವ ಅಂಡ್ರೆ ಬೂಮಾ, 'ಪ್ರೀತಿಯ ನಕಾಸಿ ನೋಡಿಕೊಳ್ಳಲು ನನಗೆ ಅವಕಾಶ ಸಿಕ್ಕಿದ್ದು ನನ್ನ ಪುಣ್ಯ. ಅದರ ಮೃದು ಸ್ವಭಾವ ಹಾಗೂ ಚಾಣಾಕ್ಷತೆ ಗೊರಿಲ್ಲಾಗಳು ಮನುಷ್ಯನಿಗೆ ಎಷ್ಟೊಂದು ಹತ್ತಿರ ಎಂಬುದನ್ನು ತೋರಿಸಿತು. ನಾನು ಎನ್ಡಕಾಸಿ ಸ್ನೇಹಿತ ಎಂಬುದು ನನಗೆ ಹೆಮ್ಮೆ ಮೂಡಿಸುತ್ತದೆ. ಆ ಮಗುವಿನ ಪ್ರೀತಿ ಕಳೆದುಕೊಂಡು ನಾನು ಇಂದು ಅನಾಥವಾಗಿದ್ದೇನೆ' ಎಂದಿದ್ದಾರೆ.
ಸಾಕಷ್ಟು ಜನ ಸಾಮಾಜಿಕ ಜಾಲತಾಣಗಳಲ್ಲಿ ಎನ್ಡಕಾಸಿಯನ್ನು ಸ್ಮರಿಸಿಕೊಳ್ಳುತ್ತಿದ್ದಾರೆ. ಅದು ಅಂಡ್ರೆ ಬೂಮಾ ಮಡಿಲಲ್ಲಿ ಪ್ರಾಣ ಬಿಟ್ಟಿದ್ದು ಕಂಡು ಮರುಗುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.