ADVERTISEMENT

ಭಾರತ, ರಷ್ಯಾ, ಚೀನಾದಲ್ಲಿ ಅಲ್ಪಸಂಖ್ಯಾತರ ಧಾರ್ಮಿಕ ಸ್ವಾತಂತ್ರ್ಯ ದಮನ: ವರದಿ

ಅಮೆರಿಕದ ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗದ ವರದಿಯಲ್ಲಿ ಉಲ್ಲೇಖ

ಪಿಟಿಐ
Published 16 ಮೇ 2023, 14:47 IST
Last Updated 16 ಮೇ 2023, 14:47 IST

ವಾಷಿಂಗ್ಟನ್: ರಷ್ಯಾ, ಭಾರತ, ಚೀನಾ ಹಾಗೂ ಸೌದಿ ಅರೇಬಿಯಾ ರಾಷ್ಟ್ರಗಳಲ್ಲಿನ ಸರ್ಕಾರಗಳು ಅಲ್ಲಿನ ಧಾರ್ಮಿಕ ಅಲ್ಪಸಂಖ್ಯಾತರನ್ನು ಗುರಿ ಮಾಡುತ್ತಿವೆ ಎಂದು ಅಮೆರಿಕದ ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗವು ಹೇಳಿದೆ.

ಸುದ್ದಿಗೋಷ್ಠಿಯಲ್ಲಿ ಆಯೋಗದ ಮುಖ್ಯಸ್ಥ ರಾಶದ್‌ ಹುಸೇನ್‌ ಹಾಗೂ ವಿದೇಶಾಂಗ ಕಾರ್ಯದರ್ಶಿ ಆ್ಯಂಟೊನಿ ಬ್ಲಿಂಕೆನ್ ಅವರು ವಿಶ್ವದ ವಿವಿಧ ದೇಶಗಳಲ್ಲಿನ ಧಾರ್ಮಿಕ ಸ್ವಾತಂತ್ರ್ಯ ಕುರಿತ ಕಳೆದ ವರ್ಷಕ್ಕೆ ಸಂಬಂಧಿಸಿದ ವರದಿಯನ್ನು ಬಿಡುಗಡೆ ಮಾಡಿ ಮಾತನಾಡಿದರು.

‘ವಿಶ್ವದ 200 ದೇಶಗಳಲ್ಲಿನ ಧಾರ್ಮಿಕ ಸ್ವಾತಂತ್ರ್ಯ ಕುರಿತು ವಾಸ್ತವಾಂಶಗಳ ಆಧಾರದಲ್ಲಿ ಸಿದ್ಧಪಡಿಸಿದ ಸಮಗ್ರ ಮಾಹಿತಿಯನ್ನು ಈ ವರದಿ ಒಳಗೊಂಡಿದೆ’ ಎಂದು ಬ್ಲಿಂಕೆನ್ ಹೇಳಿದರು.

ADVERTISEMENT

‘ಧಾರ್ಮಿಕ ಸ್ವಾತಂತ್ರ್ಯ ಅಥವಾ ನಂಬಿಕೆಯನ್ನು ಹತ್ತಿಕ್ಕಲಾಗುತ್ತಿರುವುದಕ್ಕೆ ಈ ವರದಿಯಲ್ಲಿ ಒತ್ತು ನೀಡಲಾಗಿದೆ’ ಎಂದು ಹೇಳಿದ ಬ್ಲಿಂಕೆನ್, ಭಾರತದ ಹೆಸರನ್ನು ಪ್ರಸ್ತಾಪಿಸಲಿಲ್ಲ.

‘ಭಾರತದಲ್ಲಿ ಅಲ್ಪಸಂಖ್ಯಾತರನ್ನು ಸುಲಭವಾಗಿ ಗುರಿ ಮಾಡಲಾಗುತ್ತಿದೆ. ಹರಿದ್ವಾರದಲ್ಲಿ ನಡೆದ ಸಮಾವೇಶವೊಂದರಲ್ಲಿ ಮುಸ್ಲಿಮರ ವಿರುದ್ಧ ಕೆಲವರು ಮಾಡಿದ್ದ ದ್ವೇಷ ಭಾಷಣಕ್ಕೆ ಭಾರತದ ಪ್ರಮುಖ ವಕೀಲರು, ಅಲ್ಪಸಂಖ್ಯಾತರ ಮುಖಂಡರು ಹಾಗೂ ವಿವಿಧ ಧಾರ್ಮಿಕ ಸಮುದಾಯಗಳಿಂದ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು’ ಎಂದು ರಾಶದ್‌ ಹುಸೇನ್‌ ಹೇಳಿದರು.

‘ಭಾರತವು ತನ್ನ ಬಹುತ್ವ ಹಾಗೂ ಸಹಿಷ್ಣುತೆಯ ಪರಂಪರೆಯನ್ನು ಎತ್ತಿ ಹಿಡಿಯಬೇಕು’ ಎಂದು ಹುಸೇನ್‌ ಹೇಳಿದರು.

‘ಮ್ಯಾನ್ಮಾರ್‌ನಲ್ಲಿ ಮಿಲಿಟರಿ ಆಡಳಿತವು ನಿರಂತರವಾಗಿ ರೋಹಿಂಗ್ಯಾ ಸಮುದಾಯವನ್ನು ಹತ್ತಿಕ್ಕುತ್ತಿದೆ. ಮಿಲಿಟರಿ ದಬ್ಬಾಳಿಕೆಯಿಂದಾಗಿ ಸಾವಿರಾರು ರೋಹಿಂಗ್ಯಾಗಳು ತಮ್ಮ ಮನೆಗಳನ್ನು ತೊರೆದಿದ್ದಾರೆ’ ಎಂದರು.

ರಷ್ಯಾ, ಚೀನಾ ನಂತರ ಅಫ್ಗಾನಿಸ್ತಾನದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರನ್ನು ಹೆಚ್ಚು ಗುರಿಯಾಗಿಸಲಾಗುತ್ತಿದೆ ಎಂದೂ ಹೇಳಿದರು.

ಗುಜರಾತ್‌ನಲ್ಲಿ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಹಿಂದೂಗಳ ಮೇಲೆ ಹಲ್ಲೆ ಮಾಡಿದ ಆರೋಪದ ಮೇಲೆ ನಾಲ್ವರು ಮುಸ್ಲಿಮರನ್ನು ಸಾರ್ವಜನಿಕವಾಗಿಯೇ ಪೊಲೀಸರು ಥಳಿಸಿದರು. ಏಪ್ರಿಲ್‌ನಲ್ಲಿ ಮಧ್ಯಪ್ರದೇಶದ ಖರ್ಗೋನ್‌ನಲ್ಲಿ ನಡೆದ ಕೋಮು ಗಲಭೆ ಸಂದರ್ಭದಲ್ಲಿ ಮುಸ್ಲಿಮರ ಮನೆಗಳು ಹಾಗೂ ಅಂಗಡಿಗಳನ್ನು ರಾಜ್ಯ ಸರ್ಕಾರ ನೆಲಸಮಗೊಳಿಸಿತು ಎಂದು ಹುಸೇನ್‌ ಹೇಳಿದರು.

ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್‌ ಅವರು ಕಳೆದ ಸೆಪ್ಟೆಂಬರ್‌ನಲ್ಲಿ ಮುಸ್ಲಿಂ ಸಮುದಾಯದ ಐವರು ಪ್ರಮುಖರನ್ನು ಭೇಟಿ ಮಾಡಿ, ಹಿಂದೂಗಳು ಹಾಗೂ ಮುಸ್ಲಿಮರಲ್ಲಿ ಸೌಹಾರ್ದ ಮೂಡಿಸುವ ಕುರಿತು ಚರ್ಚೆ ನಡೆಸಿದ್ದನ್ನು ಸಹ ಈ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.

undefined undefined

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.