ನವದೆಹಲಿ: ಕೇಂದ್ರ ಸರ್ಕಾರದ ಮೂರು ನೂತನ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ದೆಹಲಿ ಗಡಿ ಪ್ರದೇಶಗಳಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಅಂತರ ರಾಷ್ಟ್ರೀಯ ಪಾಪ್ ಗಾಯಕಿ ರಿಹಾನ್ನಾ ಬೆಂಬಲ ಸೂಚಿಸಿದ್ದಾರೆ.
ಈ ಕುರಿತು ಸಿಎನ್‌ಎನ್ ಲೇಖನ ಸಮೇತ ಟ್ವೀಟ್ ಮಾಡಿರುವ ರಿಹಾನ್ನಾ, ನಾವ್ಯಾಕೆ ಈ ವಿಷಯದ ಕುರಿತು ಚರ್ಚಿಸುತ್ತಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.
ವಿವಾದಿತ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿ ರೈತರು, ಕಳೆದ ವರ್ಷ ನವೆಂಬರ್ 26ರಿಂದಲೇ ಪ್ರತಿಭಟನೆ ನಡೆಸುತ್ತಿದ್ದಾರೆ. ರೈತರು ಕಳೆದ ಎರಡು ತಿಂಗಳಿಗಿಂತಲೂ ಹೆಚ್ಚು ಸಮಯದಿಂದ ಪ್ರತಿಭಟಿಸುತ್ತಿದ್ದರೂ ಸರ್ಕಾರದ ಜೊತೆಗೆ ಹಲವು ಸುತ್ತಿನ ಮಾತುಕತೆಗಳು ನಡೆದರೂ ಯಾವುದೇ ಫಲ ದೊರಕಲಿಲ್ಲ.
ರೈತರ ಪ್ರತಿಭಟನೆಯು ಈಗ ಜಾಗತಿಕ ಮಟ್ಟದಲ್ಲೂ ಚರ್ಚೆಯಾಗಲು ಆರಂಭಿಸಿದ್ದು, ರಿಹಾನ್ನಾ ಈ ಬಗ್ಗೆ ಸ್ವರ ಎತ್ತಿದ ಮೊದಲ ಜಾಗತಿಕ ತಾರೆ ಎನಿಸಿಕೊಂಡಿದ್ದಾರೆ.
ಜನವರಿ 26 ಗಣರಾಜ್ಯೋತ್ಸವದ ದಿನದಂದು ನಡೆದ ಟ್ರ್ಯಾಕ್ಟರ್ ರ‍್ಯಾಲಿಯಲ್ಲಿ ಹಿಂಸಾಚಾರ ನಡೆದ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸುತ್ತಿರುವ ಪ್ರದೇಶಗಳಲ್ಲಿ ಅಂತರ್ಜಾಲ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಈ ಕುರಿತು ಸಿಎನ್‌ಎನ್ ವರದಿ ಪ್ರಕಟಿಸಿದೆ.
ರಿಹಾನ್ನಾ ಮಾಡಿರುವ ಟ್ವೀಟ್‌ಗೆ ವ್ಯಾಪಕ ಪ್ರತಿಕ್ರಿಯೆ ದೊರಕುತ್ತಿದ್ದು, ಒಂದು ವರೆ ಲಕ್ಷಕ್ಕೂ ಹೆಚ್ಚು ರಿಟ್ವೀಟ್‌ಗಳು ಲಭಿಸಿದೆ. ಅಲ್ಲದೆ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿದೆ.
ಏತನ್ಮಧ್ಯೆ ಭಾರತದ ಆಂತರಿಕ ವಿಷಯಗಳಲ್ಲಿ ವಿದೇಶಿಯರು ಮೂಗು ತೂರಿಸುವ ಅಗತ್ಯವಿಲ್ಲ ಎಂದು ರಿಹಾನ್ನಾಗೆ ಕ್ರಿಕೆಟಿಗ ಪಗ್ರ್ಯಾನ್ ಓಜಾ ತಿರುಗೇಟು ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.