ADVERTISEMENT

ಡೊನಾಲ್ಡ್‌ ಟ್ರಂಪ್ ಹತ್ಯೆ ಯತ್ನ: ಎಫ್‌ಬಿಐನಿಂದ ಅಧಿಕೃತ ಮಾಹಿತಿ ಬಿಡುಗಡೆ

ಅನುಮಾನಗಳಿಗೆ ತೆರೆ ಎಳೆದ ಎಫ್‌ಬಿಐ

ಪಿಟಿಐ
Published 27 ಜುಲೈ 2024, 5:26 IST
Last Updated 27 ಜುಲೈ 2024, 5:26 IST
<div class="paragraphs"><p>ಡೊನಾಲ್ಡ್‌ ಟ್ರಂಪ್</p></div>

ಡೊನಾಲ್ಡ್‌ ಟ್ರಂಪ್

   

ವಾಷಿಂಗ್ಟನ್: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಕಿವಿಗೆ ಗುಂಡೇಟಿನಿಂದಲೇ ಗಾಯ ಆಗಿದೆ ಎಂಬುದನ್ನು ಎಫ್‌ಬಿಐ ಶುಕ್ರವಾರ ದೃಢಪಡಿಸಿದ್ದು, ಈ ಬಗ್ಗೆ ಎದ್ದಿದ್ದ ಊಹಾಪೋಹಗಳಿಗೆ ಸುಮಾರು ಎರಡು ವಾರಗಳ ಬಳಿಕ ತೆರೆ ಎಳೆದಿದೆ.

‘ಮಾಜಿ ಅಧ್ಯಕ್ಷ ಟ್ರಂಪ್ ಅವರ ಕಿವಿಗೆ ತಾಗಿರುವುದು ಗುಂಡು ಎಂಬುದು ಖಚಿತವಾಗಿದೆ. ದಾಳಿಕೋರನ ರೈಫಲ್‌ನಿಂದ ಸಿಡಿದ ಗುಂಡು ನೇರವಾಗಿ ಕಿವಿಯನ್ನು ಸವರಿಕೊಂಡು ಹೋಗಿದೆ ಅಥವಾ ಗುಂಡಿನ ಚೂರು ತಾಗಿ ಗಾಯ ಆಗಿದೆ’ ಎಂದು ಎಫ್‌ಬಿಐ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ADVERTISEMENT

ಮುಂಬರುವ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್‌ ಪಕ್ಷದ ಅಭ್ಯರ್ಥಿಯಾಗಿರುವ ಟ್ರಂಪ್‌ ಅವರು ಜುಲೈ 13 ರಂದು ಪೆನ್ಸಿಲ್ವೇನಿಯಾದ ಬಟ್ಲರ್‌ ನಗರದಲ್ಲಿ ಚುನಾವಣಾ ರ್‍ಯಾಲಿಯಲ್ಲಿ ಮಾತನಾಡುತ್ತಿದ್ದಾಗ ಗುಂಡಿನ ದಾಳಿ ನಡೆದಿತ್ತು. ಟ್ರಂಪ್‌ ಹತ್ಯೆಗೆ ಯತ್ನಿಸಿದ್ದ ಬಂದೂಕುಧಾರಿ ಥಾಮಸ್‌ ಮ್ಯಾಥ್ಯೂ ಕ್ರೂಕ್ಸ್‌ ಎಂಬಾತನನ್ನು ಅಮೆರಿಕದ ಸೀಕ್ರೆಟ್‌ ಸರ್ವೀಸ್‌ನ ಭದ್ರತಾ ಸಿಬ್ಬಂದಿ ಹತ್ಯಗೈದಿದ್ದರು.

‘ಟ್ರಂಪ್ ಅವರ ಕಿವಿಗೆ ನಿಜವಾಗಿಯೂ ಗುಂಡು ತಗುಲಿದೆಯೇ ಎಂಬ ಬಗ್ಗೆ ಅನುಮಾನಗಳಿವೆ’ ಎಂದು ಎಫ್‌ಬಿಐ ನಿರ್ದೇಶಕರ ಕ್ರಿಸ್ಟೋಫರ್‌ ರೇ ಕೆಲದಿನಗಳ ಹಿಂದೆ ಹೇಳಿದ್ದರು. ಇದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು. ಅದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದ ಟ್ರಂಪ್‌, ‘ಎಫ್‌ಬಿಐ ಅಮೆರಿಕದ ಜನರ ವಿಶ್ವಾಸವನ್ನು ಕಳೆದುಕೊಂಡರೂ ಅಚ್ಚರಿಯಿಲ್ಲ’ ಎಂದಿದ್ದರು. 

ಎಫ್‌ಬಿಐ ಮತ್ತು ಸೀಕ್ರೆಟ್‌ ಸರ್ವೀಸ್‌ ಸೇರಿದಂತೆ ಈ ಘಟನೆ ಬಗ್ಗೆ ತನಿಖೆಯಲ್ಲಿ ತೊಡಗಿರುವ ಸಂಸ್ಥೆಗಳ ಅಧಿಕಾರಿಗಳು ಟ್ರಂಪ್‌ ಅವರ ಗಾಯಕ್ಕೆ ಏನು ಕಾರಣ ಎಂಬ ಮಾಹಿತಿಯನ್ನು ಬಹಿರಂಗಪಡಿಸಲು ಇದುವರೆಗೂ ನಿರಾಕರಿಸುತ್ತಲೇ ಬಂದಿದ್ದರು. ಘಟನೆಯ ಬಳಿಕ ಟ್ರಂಪ್‌ ಅವರಿಗೆ ಎಲ್ಲಿ ಚಿಕಿತ್ಸೆ ನೀಡಲಾಗಿದೆ ಎಂಬ ಬಗ್ಗೆ ಅವರ ಪ್ರಚಾರ ತಂಡ ಕೂಡಾ ಯಾವುದೇ ಮಾಹಿತಿ ಒದಗಿಸಿರಲಿಲ್ಲ. 

ಕಮಲಾ ಉಮೇದುವಾರಿಕೆ ಘೋಷಣೆ

ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರು ನವೆಂಬರ್‌ನಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಗೆ ಶನಿವಾರ ಅಧಿಕೃತವಾಗಿ ತಮ್ಮ ಉಮೇದುವಾರಿಕೆಯನ್ನು ಘೋಷಿಸಿದರು. ನವೆಂಬರ್‌ 5ರಂದು ನಡೆಯಲಿರುವ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ನನ್ನ ಉಮೇದುವಾರಿಕೆಯನ್ನು ಅಧಿಕೃತವಾಗಿ ಘೋಷಿಸುವ ಫಾರ್ಮ್‌ಗಳಿಗೆ ಸಹಿ ಹಾಕಿದ್ದೇನೆ. ಪ್ರತಿಯೊಂದು ಮತ ಪಡೆಯಲು ನಾನು ಶ್ರಮಿಸುತ್ತೇನೆ’ ಎಂದು 59 ವರ್ಷದ ಕಮಲಾ ಅವರು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ. 

‘ಕಮಲಾ ಹ್ಯಾರಿಸ್‌ ಕಟ್ಟಾ ಉದಾರವಾದಿ’

ಅಧ್ಯಕ್ಷೀಯ ಚುನಾವಣೆಯಲ್ಲಿ ತಮ್ಮ ಸಂಭವನೀಯ ಪ್ರತಿಸ್ಪರ್ಧಿಯಾಗಿರುವ ಡೆಮಾಕ್ರಟಿಕ್‌ ಪಕ್ಷದ ಕಮಲಾ ಹ್ಯಾರಿಸ್‌ ವಿರುದ್ಧ ಟ್ರಂಪ್‌ ಅವರು ವಾಗ್ದಾಳಿ ಮುಂದುವರಿಸಿದ್ದಾರೆ.

‘ಕಮಲಾ ಅವರು ಆಯ್ಕೆಯಾದರೆ ಅಮೆರಿಕದ ಇತಿಹಾಸದಲ್ಲೇ ಕಟ್ಟಾ ಉದಾರವಾದಿ ಅಧ್ಯಕ್ಷೆ ಎನಿಸಲಿದ್ದಾರೆ’ ಎಂದು ಫ್ಲಾರಿಡಾದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಟೀಕಿಸಿದ್ದಾರೆ. 

‘ಹ್ಯಾರಿಸ್‌ ಅವರು ಇಡೀ ಸಂಸತ್ತಿನಲ್ಲಿ ತೀವ್ರ ಎಡಪಂಥೀಯ ಧೋರಣೆಯುಳ್ಳ ಸೆನೆಟರ್‌ಗಳಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುವರು. ಅವರು ಅಧ್ಯಕ್ಷೆಯಾಗಿ ಆಯ್ಕೆಯಾದರೆ ಎಡಪಂಥೀಯ ಧೋರಣೆಯುಳ್ಳ ನೂರಾರು ನ್ಯಾಯಾಧೀಶರನ್ನು ನೇಮಿಸುತ್ತಾರೆ. ಸ್ಯಾಸ್‌ಫ್ರಾನ್ಸಿಸ್ಕೊದಲ್ಲಿ ತಾವು ತಂದಿರುವ ಉದಾರವಾದಿ ನೀತಿಗಳನ್ನು ಇಡೀ ದೇಶದ ಮೇಲೆ ಬಲವಂತವಾಗಿ ಹೇರಲಿದ್ದಾರೆ’ ಎಂದು ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.