ವಾಷಿಂಗ್ಟನ್: ಕೊರೊನಾ ಸೋಂಕಿತರಿಗೆ ಮಲೇರಿಯಾ ನಿರೋಧಕ ಹೈಡ್ರಾಕ್ಸಿ ಕ್ಲೋರೋಕ್ವಿನ್ ಮತ್ತು ಅದಕ್ಕೆ ಸರಿಸಮನಾದ ಔಷಧವನ್ನು ನೀಡುವುದರಿಂದ ಅವರ ಹೃದಯದ ಮೇಲೆ ಅಡ್ಡಪರಿಣಾಮಗಳಾಗುವ ಸಾಧ್ಯತೆ ಇದೆ ಎಂದು ಅಮೆರಿಕದ ಆಹಾರ ಮತ್ತು ಔಷಧ ಆಡಳಿತ (ಎಫ್‌ಡಿಎ) ತಿಳಿಸಿದೆ.
ಸಂಶೋಧನೆ, ಅಧ್ಯಯನಕ್ಕಾಗಿ ಆಸ್ಪತ್ರೆಗಳಲ್ಲಿ ಬಳಸುವುದನ್ನು ಹೊರತುಪಡಿಸಿ ಕೊರೊನಾ ವೈರಸ್ ರೋಗಿಗಳಿಗೆ ಹೈಡ್ರಾಕ್ಸಿ ಕ್ಲೋರೋಕ್ವಿನ್ ನೀಡದಂತೆ ವೈದ್ಯರಿಗೆ ಎಚ್ಚರಿಕೆಯನ್ನೂ ನೀಡಿದೆ.
ಕೊರೊನಾ ಸೋಂಕಿತರ ಚಿಕಿತ್ಸೆಯಲ್ಲಿ ಮಲೇರಿಯಾ ಹೈಡ್ರಾಕ್ಸಿ ಕ್ಲೋರೋಕ್ವಿನ್ ಪರಿಣಾಮಕಾರಿಯಾಗಬಲ್ಲದು ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇತ್ತೀಚೆಗೆ ಹೇಳಿದ್ದರು. ಬಳಿಕ ಅನೇಕ ವೈದ್ಯರು ಕೊರೊನಾ ಸೋಂಕಿತರಿಗೆ ಹೈಡ್ರಾಕ್ಸಿ ಕ್ಲೋರೋಕ್ವಿನ್ ನೀಡಿದ್ದರು.
ಹೈಡ್ರಾಕ್ಸಿ ಕ್ಲೋರೋಕ್ವಿನ್ ಸೇವನೆಯಿಂದ ಹೃದಯ ಬಡಿತದಲ್ಲಿ ಏರಿಳಿತ, ರಕ್ತದೊತ್ತಡದಲ್ಲಿ ಇಳಿಕೆ, ಸ್ನಾಯು ಅಥವಾ ನರಗಳಿಗೆ ಹಾನಿಯಾಗುವ ಸಾಧ್ಯತೆ ಇದೆ.
ನ್ಯೂಯಾರ್ಕ್‌ನ ಆಸ್ಪತ್ರೆಯೊಂದರಲ್ಲಿ 84 ಕೊರೊನಾ ಸೋಂಕಿತರಿಗೆ ಹೈಡ್ರಾಕ್ಸಿ ಕ್ಲೋರೋಕ್ವಿನ್ ಮತ್ತು ಅಜಿಥ್ರೊಮೈಸಿನ್ ನೀಡಲಾಗಿತ್ತು. ಅವರ ಹೃದಯ ಬಡಿತದಲ್ಲಿ ಏರಿಳಿತ ಕಂಡುಬಂದಿತ್ತು. ಈ ವಿಚಾರವನ್ನು ಅಲ್ಲಿನ ವೈದ್ಯರು ವರದಿಯೊಂದರಲ್ಲಿ ಉಲ್ಲೇಖಿಸಿದ್ದರು. ಈ ಹಿನ್ನೆಲೆಯಲ್ಲಿ ಎಫ್‌ಡಿಎ ಎಚ್ಚರಿಕೆ ನೀಡಿದೆ.
ಈ ಎರಡೂ ಔಷಧಗಳು ಕೆಲವೊಮ್ಮೆ ಹೃದಯ ಬಡಿತ ಅಪಾಯಕಾರಿ ಏರಿಳಿತಕ್ಕೆ ಕಾರಣವಾಗುತ್ತವೆ. ಕೊರೊನಾ ವಿರುದ್ಧ ಹೋರಾಡುವಲ್ಲಿ ಈ ಔಷಧಗಳ ಸಾಮರ್ಥ್ಯ ಇನ್ನೂ ಸಾಬೀತಾಗಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು.
ಅಧ್ಯಯನ ಮತ್ತು ಸಂಶೋಧನೆಗೆ ಒಳಪಡಿಸದೆ ಹೈಡ್ರಾಕ್ಸಿ ಕ್ಲೋರೋಕ್ವಿನ್ ಮತ್ತು ಅಜಿಥ್ರೊಮೈಸಿನ್ ನೀಡುವುದು ಒಳ್ಳೆಯದಲ್ಲವೆಂದು ಅಮೆರಿಕದ ಆರೋಗ್ಯ ತಜ್ಞರ ರಾಷ್ಟ್ರೀಯ ಸಂಸ್ಥೆಯೊಂದು ಕಳೆದ ವಾರ ಹೇಳಿತ್ತು.
ಕೆಲವೇ ಕೆಲವು ಕೊರೊನಾ ಸೋಂಕಿತರಿಗೆ ಹೈಡ್ರಾಕ್ಸಿ ಕ್ಲೋರೋಕ್ವಿನ್ ನೀಡಿ ಪರೀಕ್ಷಿಸಲು ಎಫ್‌ಡಿಎ ಕಳೆದ ತಿಂಗಳು ಅನುಮತಿ ನೀಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.