ಮೇಲ್ಬರ್ನ್: ಈಗಾಗಲೇ ಸಂಭವಿಸಿದ ಭೂಕುಸಿತದಲ್ಲಿ ನೂರಾರು ಮಂದಿ ಭೂಸಮಾಧಿಯಾಗಿರುವ ಪಪುವಾ ನ್ಯೂಗಿನಿಯಲ್ಲಿ ಮತ್ತೆ ಭೂಕುಸಿತವಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಹಲವು ಗ್ರಾಮಗಳಲ್ಲಿ ಅವಶೇಷಗಳಡಿ ಮೃತರ ದೇಹಗಳು ಸಿಲುಕಿಕೊಂಡಿವೆ. ಅಲ್ಲದೆ, ಭೂಕುಸಿತದ ಪರಿಣಾಮ ನೀರಿನ ಹರಿವು ಹೆಚ್ಚಿದ್ದು, ಪ್ರವಾಹ ಉಂಟಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದಾಗಿ ಪಪುವಾ ನ್ಯೂಗಿನಿಯಲ್ಲಿ ಕಾಯಿಲೆ ವ್ಯಾಪಿಸುವ ಸಾಧ್ಯತೆಯೂ ಇದೆ ಎಂದು ವಿಶ್ವಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.
ಈಗಾಗಲೇ 2000ಕ್ಕೂ ಹೆಚ್ಚು ಮಂದಿ ಸಮಾಧಿಯಾಗಿದ್ದು, ಎರಡನೇ ಬಾರಿಗೆ ಭೂಕುಸಿತವಾಗುವ ಸಂಭವವಿದೆ. ಹಾಗಾಗಿ, ಈ ಭಾಗದಲ್ಲಿರುವ 8 ಸಾವಿರ ಮಂದಿಯನ್ನು ಸುರಕ್ಷಿತ ಜಾಗಗಳಿಗೆ ಸ್ಥಳಾಂತರಿಸಬೇಕು ಎಂದು ವಲಸೆ ನಿಯೋಗದ ಅಂತರರಾಷ್ಟ್ರೀಯ ಸಂಸ್ಥೆಯ ಮುಖ್ಯಸ್ಥ ಸೆರ್ಹಾನ್ ಅಕ್ಟೊಪ್ರ್ಯಾಕ್ ತಿಳಿಸಿದ್ದಾರೆ.
ಭೂಕುಸಿತದ ಪರಿಣಾಮ ಬೃಹತ್ ಬಂಡೆಗಳು ಮತ್ತು ಅವಶೇಷಗಳು ಎಲ್ಲೆಡೆ ಎದ್ದುಕಾಣುತ್ತಿವೆ. ಕುಡಿಯುವ ನೀರಿನ ಮೂಲಗಳಿಗೆ ಸಂಪೂರ್ಣ ಹಾನಿಯಾಗಿದೆ. ಅಲ್ಲದೆ, ತೋಟಗಳು, ಹೊಲಗಳು ಕೊಚ್ಚಿಹೋಗಿವೆ. ಇದರಿಂದ ಜನಜೀವನ ಅಸ್ತವ್ಯಸ್ತವಾಗಿದೆ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.