ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಫೆಬ್ರುವರಿ 8ರಂದು ನಡೆಯಲಿರುವ ಸಾರ್ವತ್ರಿಕ ಚುನಾವಣೆಯನ್ನು ಮುಂದೂಡಲು ಸೆನೆಟ್ ಈ ತಿಂಗಳ ಆರಂಭದಲ್ಲಿ ಅಂಗೀಕರಿಸಿದ ನಿರ್ಣಯವನ್ನು ಪಾಕಿಸ್ತಾನದ ಚುನಾವಣಾ ಆಯೋಗವು(ECP) ಸೋಮವಾರ ತಿರಸ್ಕರಿಸಿದೆ.
ದೇಶದಲ್ಲಿ ರಾಜಕೀಯ ಅನಿಶ್ಚಿತತೆ, ಶೀತ ಹವಾಮಾನ ಮತ್ತು ಭದ್ರತಾ ಕಾರಣಗಳನ್ನು ಉಲ್ಲೇಖಿಸಿ ಸಂಸತ್ತಿನ ಮೇಲ್ಮನೆ ಸಾರ್ವತ್ರಿಕ ಚುನಾವಣೆಯನ್ನು ಮುಂದೂಡುವ ನಿರ್ಣಯವನ್ನು ಜನವರಿ 5 ರಂದು ಅಂಗೀಕರಿಸಿತ್ತು.
ಸ್ವತಂತ್ರ ಸೆನೆಟರ್ ದಿಲಾವರ್ ಖಾನ್ ಮಂಡಿಸಿದ ಈ ನಿರ್ಣಯವು ಸೆನೆಟ್‌ನಲ್ಲಿ ಒಪ್ಪಿಗೆ ಪಡೆದಿತ್ತು. ಆದರೆ ಪ್ರಮುಖ ರಾಜಕೀಯ ಪಕ್ಷಗಳು ಇದು ಅಸಂವಿಧಾನಿಕ ಎಂದು ಟೀಕಿಸಿದ್ದವು. ಸೆನೆಟ್‌ನ 100 ಸದಸ್ಯರಲ್ಲಿ ಕೇವಲ 14 ಶಾಸಕರು ಮಾತ್ರ ಹಾಜರಿದ್ದು ಅದನ್ನು ಅಂಗೀಕರಿಸಲಾಗಿತ್ತು.
ಆದರೆ ಸೋಮವಾರದ ಹೇಳಿಕೆಯಲ್ಲಿ, ಪಾಕಿಸ್ತಾನದ ಚುನಾವಣಾ ಆಯೋಗವು ನಿರ್ಣಯದ ಬಗ್ಗೆ ಸ್ಪಷ್ಟನೆ ನೀಡಿದೆ. ಉಸ್ತುವಾರಿ ಫೆಡರಲ್ ಮತ್ತು ಪ್ರಾಂತೀಯ ಸರ್ಕಾರಗಳಿಗೆ ಭದ್ರತಾ ವ್ಯವಸ್ಥೆ ಹೆಚ್ಚಿಸಲು ಹಾಗೂ ಮತದಾರರಿಗೆ ಅನುಕೂಲಕರ ವಾತಾವರಣವನ್ನು ಕಲ್ಪಿಸಲು ಆಯೋಗ ಬದ್ಧವಾಗಿದೆ ಎಂದು ಹೇಳಿದೆ.
ಶಾಂತಿಯುತ ಚುನಾವಣೆಗಳನ್ನು ನಡೆಸಲು ಅಗತ್ಯವಿರುವ ಎಲ್ಲ ವ್ಯವಸ್ಥೆಗಳನ್ನು ಮಾಡಿಕೊಂಡಿರುವುದಾಗಿ ಚುನಾವಣಾ ಆಯೋಗ ಹೇಳಿದೆ. ಅಲ್ಲದೆ, 2024ರ ಫೆಬ್ರುವರಿ 8ರಂದು ಚುನಾವಣೆ ನಡೆಸಲು ಬದ್ಧ ಎಂದು ಸುಪ್ರೀಂ ಕೋರ್ಟ್‌ಗೂ ತಿಳಿಸಿರುವುದಾಗಿ ಆಯೋಗ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.