ADVERTISEMENT

ಪೌರತ್ವ ತಿದ್ದುಪಡಿ ಮಸೂದೆ: ಅಮಿತ್ ಶಾ ಮೇಲೆ ನಿರ್ಬಂಧ ವಿಧಿಸಲು ಅಮೆರಿಕ ಆಯೋಗ ಮನವಿ

ಪಿಟಿಐ
Published 10 ಡಿಸೆಂಬರ್ 2019, 6:05 IST
Last Updated 10 ಡಿಸೆಂಬರ್ 2019, 6:05 IST
ಅಮಿತ್ ಶಾ
ಅಮಿತ್ ಶಾ   

ವಾಷಿಂಗ್ಟನ್:ಪೌರತ್ವ (ತಿದ್ದುಪಡಿ) ಮಸೂದೆ ರಾಜ್ಯಸಭೆಯಲ್ಲಿಯೂ ಅಂಗೀಕಾರವಾದರೆ ಗೃಹ ಸಚಿವ ಅಮಿತ್ ಶಾ ವಿರುದ್ಧ ನಿರ್ಬಂಧ ವಿಧಿಸಬೇಕು ಎಂದು ಅಂತರರಾಷ್ಟ್ರೀಯಧಾರ್ಮಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಅಮೆರಿಕದ ಆಯೋಗ ಅಲ್ಲಿನ ಸರ್ಕಾರಕ್ಕೆ ಮನವಿ ಮಾಡಿದೆ.

ಮಸೂದೆಗೆ ಲೋಕಸಭೆಯಲ್ಲಿ ಅನುಮೋದನೆ ದೊರೆತಿರುವುದು ಕಳವಳ ಮೂಡಿಸಿದೆ. ಇದು ‘ತಪ್ಪು ದಿಕ್ಕಿನಲ್ಲಿ ಅಪಾಯಕಾರಿ ತಿರುವು’ ಎಂದು ಆಯೋಗ ಬಣ್ಣಿಸಿದೆ. ಮಸೂದೆಯು ಭಾರತದ ಸಂವಿಧಾನಕ್ಕೆ, ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂಬ ತತ್ವಕ್ಕೆ ಹಾಗೂ ಭಾರತದ ಭವ್ಯ ಇತಿಹಾಸಕ್ಕೆ ವಿರುದ್ಧವಾಗಿದೆ ಎಂದು ಹೇಳಿದೆ.

ಬಾಂಗ್ಲಾದೇಶ, ಅಫ್ಗಾನಿಸ್ಥಾನ ಹಾಗೂ ಪಾಕಿಸ್ತಾನದ ಮುಸ್ಲಿಮೇತರ ವಲಸಿಗರಿಗೆ ಭಾರತೀಯ ಪೌರತ್ವ ನೀಡುವ ಮಸೂದೆಗೆ ಲೋಕಸಭೆಯಲ್ಲಿ ಸೋಮವಾರ ಅನುಮೋದನೆ ದೊರೆತಿತ್ತು. ರಾಜ್ಯಸಭೆಯಲ್ಲಿ ಇನ್ನು ಮಂಡನೆಯಾಗಬೇಕಿದೆ. ಮಸೂದೆಗೆ ಪ್ರತಿಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಆದರೆ, ಅಮಿತ್ ಶಾ ಅವರು ಮಸೂದೆಯನ್ನು ಸಮರ್ಥಿಸಿಕೊಂಡಿದ್ದಾರೆ. ‘ಈ ಮಸೂದೆಯು ಸಂವಿಧಾನದ 14ನೇ ವಿಧಿಯನ್ನು ಉಲ್ಲಂಘಿಸುವುದಿಲ್ಲ ಮತ್ತು ಅಸಂವಿಧಾನಾತ್ಮಕವೂ ಅಲ್ಲ. ಅಲ್ಲದೆ ಭಾರತದಲ್ಲಿರುವ ಮುಸ್ಲಿಮರಿಗೆ ಯಾವುದೇ ತೊಂದರೆ ಆಗುವುದಿಲ್ಲ. ಆದರೆ ಮ್ಯಾನ್ಮಾರ್‌ನಿಂದ ಬರುವ ರೋಹಿಂಗ್ಯಾ ಮುಸ್ಲಿಮರಿಗೆ ಭಾರತದ ಪೌರತ್ವವನ್ನು ನೀಡುವುದಿಲ್ಲ’ ಎಂದು ಈ ಹಿಂದೆಯೇ ಸ್ಪಷ್ಟಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.