ADVERTISEMENT

500 ದಿನ ಏಕಾಂಗಿಯಾಗಿ 230 ಅಡಿ ಆಳದ ಗುಹೆಯಲ್ಲಿದ್ದು ಹೊರಬಂದ ಮಹಿಳೆ!

ರಾಯಿಟರ್ಸ್
Published 15 ಏಪ್ರಿಲ್ 2023, 6:07 IST
Last Updated 15 ಏಪ್ರಿಲ್ 2023, 6:07 IST
ಬಿಟ್ರೀಜ್ ಫ್ಲಾಮಿನಿ
ಬಿಟ್ರೀಜ್ ಫ್ಲಾಮಿನಿ   

ಮ್ಯಾಡ್ರಿಡ್: ಸ್ಪೇನ್‌ನ ಮಹಿಳಾ ಪರ್ವತಾರೋಹಿ ಒಬ್ಬರು ಬರೋಬ್ಬರಿ 230 ಅಡಿ ಆಳದ ಗುಹೆ ಒಂದರಲ್ಲಿ 500 ದಿನ ಏಕಾಂಗಿಯಾಗಿ ವಾಸ ಮಾಡಿ ಹೊರಬಂದಿದ್ದಾರೆ.

ಬಿಟ್ರೀಜ್ ಫ್ಲಾಮಿನಿ ಎಂಬ 50 ವರ್ಷದ ಪರ್ವತಾರೋಹಿ ಅವರೇ ಈ ಸಾಧನೆ ಮಾಡಿದವರು. ಅವರು ಮ್ಯಾಡ್ರಿಡ್ ಬಳಿಯ ಗ್ರವಾಡಾದ ಗುಹೆಯಲ್ಲಿ ತಂಗಿದ್ದರು.

ಇಷ್ಟು ದಿನ ಆಧುನಿಕ ಮಾನವ ಗುಹೆಯಲ್ಲಿ ಇದ್ದು ಯಶಸ್ವಿಯಾಗಿ ಹೊರ ಬಂದಿದ್ದು ಇದೇ ಮೊದಲು. ಇದೊಂದು ವಿಶ್ವದಾಖಲೆ ಎಂದು ರಾಯಿಟರ್ಸ್ ವರದಿ ಮಾಡಿದೆ.

ADVERTISEMENT

ಬಿಟ್ರೀಜ್ ಫ್ಲಾಮಿನಿ ಗುಹೆಯಿಂದ ಯಶಸ್ವಿಯಾಗಿ ಹೊರಬಂದಿದ್ದು ಅವರನ್ನು ಇತರೆ ಪರ್ವತಾರೋಹಿಗಳು, ಸ್ನೇಹಿತರು ಹಾಗೂ ವಿಜ್ಞಾನಿಗಳು ಶುಕ್ರವಾರ ಗ್ರವಾಡಾದಲ್ಲಿ ಸ್ವಾಗತಿಸಿದರು.

ನವೆಂಬರ್ 20, 2021 ರಂದು ಫ್ಲಾಮಿನಿ ಅವರು ಗುಹೆ ಪ್ರವೇಶ ಮಾಡಿದ್ದರು. ಆಗ ಅವರಿಗೆ 48 ವರ್ಷ ವಯಸ್ಸಾಗಿತ್ತು. ಎರಡು ಜನ್ಮದಿನಗಳನ್ನು ಗುಹೆಯಲ್ಲೇ ಏಕಾಂಗಿಯಾಗಿ ಅವರು ಆಚರಿಸಿಕೊಂಡಿದ್ದಾರೆ.‌‌

ಫ್ಲಾಮಿನಿ ಅವರು ಪುಸ್ತಕ ಬರೆಯಲು ಹಾಗೂ ಗುಹೆಯಲ್ಲಿನ ಮನುಷ್ಯರ ಮನೋವೈಜ್ಞಾನಿಕ ಬದಲಾವಣೆಗಳು ಏನಿರುತ್ತವೆ? ಎಂದು ಅಧ್ಯಯನ ಮಾಡಲು ಈ ಸಾಹಸ ಕೈಗೊಂಡಿದ್ದರು. ಗುಹೆಯ ಹೊರಗೆ ಅವರ ಟೀಂನ ಸದಸ್ಯರು ತುರ್ತು ಸಹಾಯಕ್ಕೆ ಮಾತ್ರ ನೆರವು ನೀಡುವ ಸೌಲಭ್ಯ ಕಲ್ಪಿಸಿದ್ದರು. ಆದರೆ, ಕಳೆದ ಎರಡು ತಿಂಗಳಿಂದ ಅವರು ಸಂಪೂರ್ಣವಾಗಿ ಹೊರಜಗತ್ತಿನ ಸಂಪರ್ಕ ಕಳೆದುಕೊಂಡಿದ್ದರು.

ಗುಹೆಯಲ್ಲಿ ಇದ್ದ 500 ದಿನಗಳಲ್ಲಿ ಹೊರಜಗತ್ತಿನಲ್ಲಿ ಏನೆಲ್ಲ ನಡೆದಿದೆ ಎಂಬ ಯಾವುದೇ ಮಾಹಿತಿ ನನಗೆ ತಿಳಿದಿಲ್ಲ. ವಾಸ್ತವವಾಗಿ ನಾನು ಗುಹೆಯಿಂದ ಹೊರಗೆ ಬರಲು ಯೋಚಿಸಿರಲಿಲ್ಲ ಎಂದು ಫ್ಲಾಮಿನಿ ಹೇಳಿದ್ದಾರೆ.

ಫ್ಲಾಮಿನಿ ಅವರ ಕುರಿತು ಸ್ಪೇನ್‌ನ ವಿಜ್ಞಾನಿಗಳು ಅಧ್ಯಯನ ಮಾಡಲಿದ್ದಾರೆ ಎಂದು ವರದಿ ತಿಳಿಸಿದೆ. ಇದುವರೆಗೆ ಚಿಲಿ ಬೊಲಿವಿಯಾದ ಗಣಿಗಾರರು 2,257 ಅಡಿಯ ಆಳದ ಗಣಿಯಲ್ಲಿ 66 ದಿನ ಸಿಲುಕಿ ಹೊರ ಬಂದಿದ್ದೇ ದಾಖಲೆಯಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.