ಸಿಂಗಪುರ: ‘ಹಿಂದಿ ಭಾಷೆಯನ್ನು ಜಾಗತಿಕ ಭಾಷೆಯನ್ನಾಗಿ ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಫಿಜಿ ದೇಶದಲ್ಲಿ ಮುಂದಿನ ವರ್ಷ ಪ್ರಥಮ ವಿಶ್ವ ಹಿಂದಿ ಸಮ್ಮೇಳನವನ್ನು ಆಯೋಜಿಸಲಾಗಿದೆ’ ಎಂದು ದಕ್ಷಿಣ ಫೆಸಿಫಿಕ್ ರಾಷ್ಟ್ರಗಳ ಭಾರತೀಯ ಹೈಕಮಿಷನರ್ ಪಿ.ಎಸ್. ಕಾರ್ತಿಕೇಯನ್ ಹೇಳಿದ್ದಾರೆ.
ಫಿಜಿಯಲ್ಲಿ ವಿಶ್ವ ಹಿಂದಿ ಸಮ್ಮೇಳನವನ್ನು ಆಯೋಜಿಸುವ ನಿರ್ಧಾರವನ್ನು ಭಾರತ ಮತ್ತು ಫಿಜಿ ಸರ್ಕಾರವು ಜಂಟಿಯಾಗಿ ತೆಗೆದುಕೊಂಡಿದೆ ಎಂದು ‘ಫಿಜಿ ಟೈಮ್ಸ್’ ವರದಿ ಮಾಡಿದೆ.
‘ಫಿಜಿ ದೇಶದ ನಾಡಿ ನಗರದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ವಿಶ್ವ ಹಿಂದಿ ಸಮ್ಮೇಳನದಲ್ಲಿ ಭಾರತೀಯ ಭಾಷೆಗಳ ವಿವಿಧ ಲೇಖಕರು, ವಿದ್ವಾಂಸರು, ಪ್ರಶಸ್ತಿ ಪುರಸ್ಕೃತರು ಸೇರಿದಂತೆ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಮುಂದಿನ ವರ್ಷದ ಮೊದಲ ತ್ರೈಮಾಸಿಕದಲ್ಲಿ ಸಮ್ಮೇಳನ ನಡೆಯುವ ಸಾಧ್ಯತೆ ಇದೆ. ನಿರ್ದಿಷ್ಟ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು’ ಎಂದೂ ಕಾರ್ತಿಕೇಯನ್ ತಿಳಿಸಿದ್ದಾರೆ.
ಫಿಜಿ ದೇಶದಲ್ಲಿ ಹಿಂದಿ ಭಾಷೆಗೆ ವಿಶೇಷ ಸ್ಥಾನವಿದೆ. ಅಲ್ಲಿನ ಮೂರು ಅಧಿಕೃತ ಭಾಷೆಗಳಲ್ಲಿ ಹಿಂದಿ ಕೂಡಾ ಒಂದು. ವಿಶ್ವಸಂಸ್ಥೆಯ ವರದಿ ಪ್ರಕಾರ, ಫಿಜಿಯಲ್ಲಿನ ಜನಸಂಖ್ಯೆಯಲ್ಲಿ ಶೇ 30ರಷ್ಟು ಭಾರತೀಯ ಮೂಲದವರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.