ಡಾಕಾ: ದಕ್ಷಿಣ ಬಾಂಗ್ಲಾದೇಶದ ರೋಹಿಂಗ್ಯಾ ನಿರಾಶ್ರಿತರ ಶಿಬಿರಕ್ಕೆ ಭಾನುವಾರ ಬೆಂಕಿ ಬಿದ್ದಿದ್ದು, ನೂರಾರು ಮನೆಗಳು ನಾಶವಾಗಿವೆ ಎಂದು ಅಧಿಕಾರಿಗಳು ಮತ್ತು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಆದರೆ, ಸಾವುನೋವುಗಳ ಬಗ್ಗೆ ತಕ್ಷಣಕ್ಕೆ ಮಾಹಿತಿ ಸಿಕ್ಕಿಲ್ಲ.
ಹತ್ತು ಲಕ್ಷಕ್ಕೂ ಹೆಚ್ಚು ರೋಹಿಂಗ್ಯಾ ನಿರಾಶ್ರಿತರು ವಾಸಿಸುವ ಕಾಕ್ಸ್ ಬಜಾರ್‌ನಲ್ಲಿರುವ ‘ಕ್ಯಾಂಪ್ 16’ ರಲ್ಲಿ ಬೆಂಕಿ ಆವರಿಸಿದೆ. ಇಲ್ಲಿರುವ ಬಹುತೇಕರು 2017 ರಲ್ಲಿ ಮ್ಯಾನ್ಮಾರ್‌ನಲ್ಲಿ ಉಂಟಾದ ಮಿಲಿಟರಿ ದಂಗೆಯಲ್ಲಿ ನಿರಾಶ್ರಿತರಾಗಿ ಪಲಾಯನಗೊಂಡು ಬಂದವರಾಗಿದ್ದಾರೆ.
ವಿಪತ್ತು ನಿರ್ವಹಣಾ ತಂಡ ಬೆಂಕಿಯನ್ನು ಹತೋಟಿಗೆ ತರಲು ಪ್ರಯತ್ನಿಸುತ್ತಿದೆ ಎಂದು ನಿರಾಶ್ರಿತರ ಉಸ್ತುವಾರಿ ವಹಿಸಿರುವ ಬಾಂಗ್ಲಾದೇಶದ ಅಧಿಕಾರಿ ಮೊಹಮ್ಮದ್ ಶಮ್ಸುದ್ ಡೌಜಾ ಹೇಳಿದ್ದಾರೆ. ಅಗ್ನಿ ಅವಘಡಕ್ಕೆ ಕಾರಣವೇನೆಂದು ಗೊತ್ತಾಗಿಲ್ಲ ಎಂದು ಅವರು ಹೇಳಿದರು.
‘ಬೆಂಕಿ ಇನ್ನೂ ವ್ಯಾಪಿಸುತ್ತಿದೆ. ದಯವಿಟ್ಟು ನಮಗಾಗಿ ಪ್ರಾರ್ಥಿಸಿ’ ಎಂದು ರೋಹಿಂಗ್ಯಾ ನಿರಾಶ್ರಿತ ಅಬು ತಾಹೆರ್ ಹೇಳಿದರು.
ಕಳೆದ ಭಾನುವಾರವೂ ಮತ್ತೊಂದು ಶಿಬಿರದಲ್ಲಿ ಬೆಂಕಿ ಅನಾಹುತ ಸಂಭವಿಸಿತ್ತು. ಆದರೆ, ಯಾವುದೆ ಪ್ರಾಣಾಪಾಯವಾಗಿರಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.