ಅಲ್ಬನಿ, ನ್ಯೂಯಾರ್ಕ್: ರೋವನ್ ವಿಲ್ಸನ್ ಅವರನ್ನು ರಾಜ್ಯದ ಮುಖ್ಯ ನ್ಯಾಯಮೂರ್ತಿಯನ್ನಾಗಿ ನೇಮಿಸುವ ಪ್ರಸ್ತಾವಕ್ಕೆ ನ್ಯೂಯಾರ್ಕ್‌ನ ಸೆನೆಟ್ ಮಂಗಳವಾರ ಒಪ್ಪಿಗೆ ಸೂಚಿಸಿದೆ. ಅವರು ಈ ಹುದ್ದೆಗೇರುತ್ತಿರುವ ಕಪ್ಪು ಜನಾಂಗದ ಮೊದಲ ವ್ಯಕ್ತಿ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.
ಈ ವಿಚಾರದಲ್ಲಿ ಗವರ್ನರ್ ಕೇಟಿ ಹೊಚುಲ್‌ಗೆ ಹಿನ್ನಡೆಯಾಗಿದೆ. ಅವರು ಈ ಹುದ್ದೆಗೆ ಹೆಕ್ಟರ್ ಲಾಸಲ್ಲೆ ಅವರನ್ನು ನಾಮನಿರ್ದೇಶನ ಮಾಡಿದ್ದರು. ಹೆಕ್ಟರ್ ಹೆಸರನ್ನು ಸೆನೆಟ್ ತಿರಸ್ಕರಿಸಿದೆ.
62 ವರ್ಷದ ವಿಲ್ಸನ್ ಅವರು 2017ರಿಂದ ಕೋರ್ಟ್ ಆಫ್ ಅಪೀಲ್ಸ್‌ನ ಸಹಾಯಕ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸಿದ್ದರು. ಲಿಬರಲ್ ಪಕ್ಷದ ಸೆನೆಟರ್‌ಗಳ ವಿಶ್ವಾಸ ಗಳಿಸುವಲ್ಲಿಯೂ ಇವರು ಯಶಸ್ವಿಯಾಗಿದ್ದಾರೆ.
‘ವಿಲ್ಸನ್ ಅವರು ತಾವೊಬ್ಬ ಅತ್ಯಂತ ಚಿಂತನಶೀಲ ಹಾಗೂ ದೇಶದ ದಕ್ಷ ನ್ಯಾಯಮೂರ್ತಿಗಳಲ್ಲಿ ಒಬ್ಬರು ಎಂಬುದನ್ನು ಸಾಬೀತುಪಡಿಸಿದ್ದಾರೆ. ಹೀಗಾಗಿ ಅವರನ್ನು ಈ ಹುದ್ದೆಗೆ ನೇಮಿಸಲು ನಿರ್ಧರಿಸಲಾಗಿದೆ’ ಎಂದು ಸೆನೆಟ್‌ನ ನ್ಯಾಯಾಂಗ ಸಮಿತಿಯ ಮುಖ್ಯಸ್ಥ ಸೆನ್ ಬ್ರಾಡ್ ಹೊಯಲ್‌ಮನ್ ಸಿಗಾಲ್ ತಿಳಿಸಿದ್ದಾರೆ.
ಮಂಗಳವಾರ ಸೆನೆಟ್‌ನ ಗ್ಯಾಲರಿಯಲ್ಲಿ ಕುಳಿತಿದ್ದ ವಿಲ್ಸನ್ ಅವರು ಇಡೀ ಕಲಾಪವನ್ನು ಮೌನವಾಗಿಯೇ ವೀಕ್ಷಿಸಿದರು. ನ್ಯಾಯಮೂರ್ತಿ ಜನೆಟ್ ಡಿಫಿಯೊರೆ ಅವರು ಕಳೆದ ವರ್ಷದ ಆಗಸ್ಟ್‌ನಲ್ಲಿ ರಾಜೀನಾಮೆ ನೀಡಿದ್ದರು. ಅಂದಿನಿಂದ ಮುಖ್ಯ ನ್ಯಾಯಮೂರ್ತಿ ಹುದ್ದೆ ಖಾಲಿ ಇತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.