ಕಠ್ಮಂಡು: ಅಂಜುದೇವಿ ಶ್ರೇಷ್ಠಾ ಮತ್ತು ಸುಪ್ರೀತಾ ಗುರುಂಗ್ ಎಂಬ ನೇಪಾಳಿ ಸಲಿಂಗಿ ಮಹಿಳೆಯರು ತಮ್ಮ ಮದುವೆಯನ್ನು ಭಾನುವಾರ ಅಧಿಕೃತವಾಗಿ ನೋಂದಣಿ ಮಾಡುವ ಮೂಲಕ ಇತಿಹಾಸ ನಿರ್ಮಿಸಿದರು.
ಸಲಿಂಗಿ ಮಹಿಳಾ ಜೋಡಿಯೊಂದು ತಮ್ಮ ಮದುವೆಯನ್ನು ಅಧಿಕೃತವಾಗಿ ನೋಂದಾಯಿಸಿರುವುದು ದಕ್ಷಿಣ ಏಷ್ಯಾದಲ್ಲಿ ಇದೇ ಮೊದಲು ಎಂದು ನೇಪಾಳದ ಸಲಿಂಗಿ ಹೋರಾಟಗಾರ ಸುನೀಲ್ ಬಾಬು ಪಂತಾ ಹೇಳಿದ್ದಾರೆ.
ಅಂಜುದೇವಿ ಅವರು ಬರ್ದಿಯಾ ಜಿಲ್ಲೆಯ ನಿವಾಸಿ, ಸುಪ್ರೀತಾ ಅವರು ಸ್ಯಾಂಗ್ಜಾ ಜಿಲ್ಲೆಯ ನಿವಾಸಿ. ಬರ್ದಿಯಾದ ಜಮುನಾ ಗ್ರಾಮ ಪಂಚಾಯತಿಯಲ್ಲಿ ಇವರಿಬ್ಬರೂ ಮದುವೆ ನೋಂದಾಯಿಸಿಕೊಂಡರು. ಇಬ್ಬರಿಗೂ 33 ವರ್ಷ ವಯಸ್ಸಾಗಿದೆ.
‘ತಮ್ಮ ಆಸ್ಮಿತೆ ಆಧಾರಿತ ಹಕ್ಕುಗಳಿಗಾಗಿ ನೇಪಾಳದ ಲಿಂಗತ್ವ ಅಲ್ಪಸಂಖ್ಯಾತ (ಎಲ್‌ಜಿಬಿಟಿ) ಸಮುದಾಯವು 2001ರಿಂದಲೇ ಅಭಿಯಾನ ನಡೆಸುತ್ತಿದೆ. ಎರಡು ದಶಕಗಳ ಹೋರಾಟದ ಬಳಿಕ, ಸಲಿಂಗಿ ವಿವಾಹವನ್ನು ಅಧಿಕೃತವಾಗಿ ನೋಂದಣಿ ಮಾಡುವ ದಿಸೆಯಲ್ಲಿ ಅಭಿಯಾನ ಯಶಸ್ವಿ ಆಗಿದೆ’ ಎಂದು ‘ಮಾಯೋಕ ಪಹಿಚಾನ್ ನೇಪಾಳ್’ ಎಂಬ ಸರ್ಕಾರೇತರ ಸಂಸ್ಥೆ ಹೇಳಿದೆ.
ಕಳೆದ ವರ್ಷ ನವೆಂಬರ್‌ನಲ್ಲಿ ಮಾಯಾ ಗುರುಂಗ್ (35) ಮತ್ತು ಸುರೇಂದ್ರ ಪಾಂಡೆ (27) ಎಂಬ ಸಲಿಂಗಿ ಪುರುಷರು ತಮ್ಮ ವಿವಾಹವನ್ನು ಅಧಿಕೃತವಾಗಿ ನೋಂದಾಯಿಸಿದ್ದರು. ಈ ಮೂಲಕ ಸಲಿಂಗಿ ವಿವಾಹವನ್ನು ಅಧಿಕೃತವಾಗಿ ನೋಂದಾಯಿಸಿದ ದಕ್ಷಿಣ ಏಷ್ಯಾದ ಪ್ರಥಮ ದೇಶ ಎಂಬ ಹೆಗ್ಗಳಿಕೆಗೂ ನೇಪಾಳ ಪಾತ್ರವಾಗಿದೆ.
ಸಲಿಂಗ ವಿವಾಹಕ್ಕೆ ನೇಪಾಳದ ಸುಪ್ರೀಂ ಕೋರ್ಟ್ 2007ರಲ್ಲೇ ಅನುಮತಿ ನೀಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.