ವಾಷಿಂಗ್ಟನ್: ಶಬ್ದಕ್ಕಿಂತ ವೇಗವಾಗಿ ವಿಮಾನ ಚಲಾಯಿಸಿದ ಮೊದಲ ವ್ಯಕ್ತಿ ಎಂಬ ಹಿರಿಮೆಗೆ ಪಾತ್ರರಾಗಿದ್ದ ಅಮೆರಿಕದ ವಾಯುಪಡೆ ಅಧಿಕಾರಿ ಚಕ್ ಯೇಗರ್ (97) ಸೋಮವಾರ ನಿಧನರಾದರು. ಟೆಸ್ಟ್ ಪೈಲಟ್ ಆಗಿದ್ದ ಅವರು ಎರಡನೇ ಮಹಾಯುದ್ಧದಲ್ಲಿ ಭಾಗಿಯಾಗಿದ್ದರು.
ಅವರ ಪತ್ನಿ ವಿಕ್ಟೋರಿಯಾ ಯೇಗರ್ ಅವರು ಟ್ವೀಟ್‌ನಲ್ಲಿ ಪತಿಯ ಸಾವಿನ ವಿಷಯ ಖಚಿತಪಡಿಸಿದ್ದಾರೆ. ಆದರೆ ಅವರು ಸಾವಿನ ಕಾರಣವನ್ನು ಉಲ್ಲೇಖಿಸಿಲ್ಲ.
‘ಅಮೆರಿಕದ ಮಹಾನ್ ಪೈಲಟ್, ಶಕ್ತಿ, ಸಾಹಸ ಮತ್ತು ದೇಶಪ್ರೇಮದ ಪರಂಪರೆಗಾಗಿ ಅವರು ಎಂದೆಂದೂ ನೆನಪಿನಲ್ಲಿ ಉಳಿಯುತ್ತಾರೆ’ ಎಂದು ಅವರು ಟ್ವೀಟ್‌ನಲ್ಲಿ ಬರೆದಿದ್ದಾರೆ.
1947ರಲ್ಲಿ ಬೆಲ್ x–1 ಸಂಶೋಧನಾ ವಿಮಾನವನ್ನು ಅವರು ಶಬ್ದಕ್ಕಿಂತಲೂ ವೇಗವಾಗಿ ಚಲಾಯಿಸಿದ್ದರು. ಅಮೆರಿಕದ ಬಾಹ್ಯಾಕಾಶ ಯೋಜನೆಗೆ ನೆರವಾಗಿದ್ದರು. ಎರಡನೇ ಮಹಾಯುದ್ಧದಲ್ಲಿ ಅಮೆರಿಕ ಧುಮುಕುವ ಮೂರು ತಿಂಗಳು ಮೊದಲು, ಅಂದರೆ 1941ರ ಸೆಪ್ಟೆಂಬರ್‌ನಲ್ಲಿ ಯೇಗರ್ ವಾಯುಪಡೆಗೆ ಸೇರಿದ್ದರು. ಏರ್‌ಕ್ರಾಫ್ಟ್ ಮೆಕ್ಯಾನಿಕ್ ಆಗಿದ್ದ ಅವರು ನಂತರ ಪೈಲಟ್ ತರಬೇತಿಯನ್ನು ಪಡೆದಿದ್ದರು. 1975ರಲ್ಲಿ ವಾಯುಪಡೆ ಸೇವೆಯಿಂದ ನಿವೃತ್ತರಾಗಿದ್ದರು.
ಚಕ್ ಯೇಗರ್ ಅವರ ಯಶೋಗಾಥೆಯನ್ನು ಆಧರಿಸಿ ‘ದಿ ರೈಟ್ ಸ್ಟಫ್’ ಎಂಬ ಕೃತಿ ಹೊರಬಂದಿತ್ತು. 1983ರಲ್ಲಿ ಇದೇ ಹೆಸರಿನಲ್ಲಿ ಚಲನಚಿತ್ರ ಬಿಡುಗಡೆಯಾಗಿದೆ. ಇದುಅವರ ಸಾಧನೆ ಜನಜನಿತವಾಗಲು ನೆರವಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.