ADVERTISEMENT

US Election | ನನಸಾಗದ ಮಹಿಳಾ ಅಧ್ಯಕ್ಷೆ ಕನಸು; ಕಮಲಾ ಹಿನ್ನಡೆಗೆ ಕಾರಣಗಳಿವು

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2024, 13:46 IST
Last Updated 6 ನವೆಂಬರ್ 2024, 13:46 IST
ಕಮಲಾ ಹ್ಯಾರಿಸ್
ಕಮಲಾ ಹ್ಯಾರಿಸ್   

ವಾಷಿಂಗ್ಟನ್‌: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವಿನ ಸಮೀಪವಿದ್ದರೂ, ಅದನ್ನು ದಕ್ಕಿಸಿಕೊಳ್ಳಲಾಗದ ಕಥೆ ಡೆಮಾಕ್ರಟಿಕ್ ಪಕ್ಷದ ಕಮಲಾ ಹ್ಯಾರಿಸ್ ಅವರದ್ದಾಗಿದೆ. ಆ ಮೂಲಕ ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್‌  2ನೇ ಬಾರಿಗೆ ಅಧ್ಯಕ್ಷ ಹುದ್ದೆಗೇರುವುದು ಬಹುತೇಕ ಖಚಿತಗೊಂಡಿದೆ.

ಕಮಲಾ ಅವರ ಸೋಲಿನ ಮೂಲಕ ಪ್ರಜಾಪ್ರಭುತ್ವ ಹಾಗೂ ಮಾನವ ಹಕ್ಕುಗಳ ರಕ್ಷಣೆ ಕುರಿತು ಸದಾ ಮಾತನಾಡುವ ರಾಷ್ಟ್ರದಲ್ಲಿ ಮಹಿಳಾ ಅಧ್ಯಕ್ಷೆಯ ಕನಸು ಈ ಬಾರಿಯೂ ನನಸಾಗದೇ ಉಳಿದಿದೆ. 2016ರಲ್ಲಿ ಹಿಲೇರಿ ಕ್ಲಿಂಟನ್‌ ಅವರು ಪರಾಭವಗೊಂಡಿದ್ದರು. ಆಗ ಮತ್ತು ಈಗ ಟ್ರಂಪ್ ಎದುರು ಇಬ್ಬರು ಮಹಿಳಾ ಸ್ಪರ್ಧಿಗಳು ಪರಾಭವಗೊಂಡಂತಾಗಿದೆ.

ಆಗಾಗ್ಗ ಮುನ್ನೆಲೆಗೆ ಬರುವ ಮಹಿಳಾ ಹಕ್ಕುಗಳ ಹೋರಾಟಗಳಲ್ಲಿ ಅಮೆರಿಕದ ಮಹಿಳೆಯರು ಸದಾ ಮುಂಚೂಣಿಯಲ್ಲಿರುತ್ತಾರೆ. ಹೀಗಿದ್ದರೂ ಈ ಮುಂದುವರಿದ ರಾಷ್ಟ್ರದಲ್ಲಿ ವೇತನ ಸಹಿತ ಹೆರಿಗೆ ರಜೆ ಇಲ್ಲ. ಇಲ್ಲಿನ ಮಹಿಳೆಯರ ಘನತೆ ಎತ್ತರವೇ ಇದ್ದರೂ, ಮಹಿಳಾ ಮುಖ್ಯ ನ್ಯಾಯಮೂರ್ತಿ ಹುದ್ದೆಗೇರಿದವರು ಇಲ್ಲ. ರಾಜಕೀಯದಲ್ಲೂ ಮಹಿಳೆಯರ ಪ್ರಾತಿನಿಧ್ಯ ಅಷ್ಟಕಷ್ಟೇ. 

ADVERTISEMENT

2024ರ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಕಮಲಾ ಹ್ಯಾರಿಸ್ ಅವರನ್ನು ಸಾಮಾಜಿಕ ಮಾಧ್ಯಮಗಳಲ್ಲಿ ತೀರಾ ಕೆಳಮಟ್ಟದಲ್ಲಿ ಟೀಕಿಸಲಾಗಿತ್ತು. ಡೀಪ್‌ಫೇಕ್‌ ಬಳಸಲಾಯಿತು. ಅವರ ಹಿಂದಿನ ಸಂಬಂಧವನ್ನು ಕೆದಕಲಾಯಿತು. ಪ್ರತಿಸ್ಪರ್ಧಿಯನ್ನು ಟೀಕಿಸುವ ಸಂದರ್ಭದಲ್ಲಿ ಟ್ರಂಪ್‌ ಕೂಡಾ ಹಿಂದೆ ಬೀಳಲಿಲ್ಲ. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‌ ಹಾಗೂ ಚೀನಾದ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರೊಂದಿಗೆ ವ್ಯವಹರಿಸಲು ಕಮಲಾಗೆ ಸಾಧ್ಯವಿಲ್ಲ ಎಂದು ಬಹಿರಂಗವಾಗಿಯೇ ಟೀಕಿಸಿದ್ದರು.

ಗರ್ಭಪಾತಕ್ಕಿದ್ದ ಸಾಂವಿಧಾನಿಕ ಹಕ್ಕು 1973ರಲ್ಲಿ ರದ್ದುಗೊಂಡ (2022) ನಂತರ ನಡೆದ ಮೊದಲ ಚುನಾವಣೆ ಇದಾಗಿದೆ. ಗರ್ಭಪಾತಕ್ಕೆ ರಾಷ್ಟ್ರವ್ಯಾಪಿ ನಿಷೇಧ ಹೇರಿರುವುದರ ವಿರೋಧಿ ನಾನು ಎಂದು ಡೊನಾಲ್ಡ್ ಟ್ರಂಪ್ ತಮ್ಮ ಚುನಾವಣಾ ಪ್ರಚಾರ ಸಂದರ್ಭದಲ್ಲಿ ಹೇಳಿದ್ದರು. ಮಹಿಳೆಯರ ದೇಹದ ಮೇಲೆ ಹಕ್ಕು ಸಾಧಿಸಲು ರಿಪಬ್ಲಿಕನ್‌ ಪಕ್ಷ ಹೊರಟಿದೆ ಎಂದು ಕಮಲಾ ಆರೋಪಿಸಿದ್ದರು.

ಆದರೆ ಈ ವಿಷಯ ಚರ್ಚೆಯಾಗುವ ಬದಲು, ಈ ಬಾರಿ ಚುನಾವಣೆಯಲ್ಲಿ ಹಣದುಬ್ಬರ, ಆರ್ಥಿಕತೆ ಹಾಗೂ ಕಾನೂನು ಬಾಹಿರ ವಲಸೆಯೇ ಮುನ್ನೆಲೆಗೆ ಬಂದವು. ಈ ವಿಷಯಗಳನ್ನು ರಿಪಬ್ಲಿಕನ್ ಪಕ್ಷ ಪರಿಣಾಮಕಾರಿಯಾಗಿ ಬಳಸಿಕೊಂಡಿತು. 

ಕಮಲಾ ಸೋಲಿಗೆ ಕಾರಣಗಳೇನು?

ಟ್ರಂಪ್‌ ವಿರುದ್ಧ ಕಮಲಾ ಅವರ ಹೆಸರು ಘೋಷಣೆ ತಡವಾಯಿತು. ಕಮಲಾ ಅವರ ಹೆಸರು ಘೋಷಣೆ ಪಕ್ಷದ ಆಡಳಿತ ಮಂಡಳಿ ಮೂಲಕವೇ ಆದರೂ, ಅದು ಪ್ರಜಾಪ್ರಭುತ್ವ ರೀತಿಯಲ್ಲಿ ಆಗಿಲ್ಲ ಎಂಬ ಆರೋಪಗಳಿವೆ. ಏಕೆಂದರೆ ಕಮಲಾ ಅವರು ಪಕ್ಷದೊಳಗೇ ಜನಪ್ರಿಯತೆ ಪಡೆದುಕೊಂಡಿರಲಿಲ್ಲ. ಜತೆಗೆ ಉಪಾಧ್ಯಕ್ಷೆಯಾಗಿಯೂ ಅವರು ಅಷ್ಟೊಂದು ಪ್ರಸಿದ್ಧಿ ಪಡೆದಿರಲಿಲ್ಲ.
ಜೋ ಬೈಡನ್ ಅವರ ಅಧಿಕಾರ ಉತ್ತಮವಾಗಿರಲಿಲ್ಲ ಎಂಬ ಮಾತುಗಳು ಅಮೆರಿಕದಲ್ಲಿ ವ್ಯಾಪಕವಾಗಿದ್ದರೂ, ಕಮಲಾ ಅವರು ಬೈಡನ್ ಅವರಿಂದ ಅಂತರ ಕಾಯ್ದುಕೊಳ್ಳಲಿಲ್ಲ. ದೇಶ ತಪ್ಪು ದಾರಿಯೆಡೆ ಸಾಗುತ್ತಿದೆ ಎಂದು ಇಡೀ ದೇಶವೇ ನಂಬಿದ್ದರಿಂದ ಬೈಡನ್‌ ಅವರ ರೇಟಿಂಗ್ ಮೈನಸ್‌ ಶೇ 15ಕ್ಕೆ ಕುಸಿದಿತ್ತು. 
ಅಮೆರಿಕದ ಗಡಿಯನ್ನು ನಿಗದಿಪಡಿಸುವಲ್ಲಿ ಬೈಡನ್ ವಿಫಲರಾಗಿದ್ದಾರೆ. ಕಮಲಾ ಬಂದರೂ ಅದೇ ನೀತಿ ಮುಂದುವರಿಯಲಿದೆ ಎಂದು ಟ್ರಂಪ್ ಟೀಕಿಸಿದ್ದರು. ಚುನಾವಣಾ ಆಯೋಗವೂ ಅಕ್ರಮ ವಲಸಿಗರ ಸಂಖ್ಯೆಯಿಂದ ಹೈರಾಣಾಗಿದ್ದೂ ಚುನಾವಣೆ ಸಂದರ್ಭದಲ್ಲಿ ಚರ್ಚೆಯಲ್ಲಿತ್ತು.
ಡೆಮಾಕ್ರೆಟಿಕ್ ಪಕ್ಷದ ಸಾಂಪ್ರದಾಯಿಕ ಮತಗಳಾದ ಆಫ್ರಿಕನ್ ಅಮೆರಿಕನ್‌ ಪುರುಷರ ಮತಗಳನ್ನು ಸೆಳೆಯುವಲ್ಲಿ ಕಮಲಾ ವಿಫಲರಾದರು. ‘ಕಪ್ಪು ವರ್ಣದ ಪುರುಷರು ಮಹಿಳಾ ಅಧ್ಯಕ್ಷೆಯ ಕಲ್ಪನೆ ಹೊಂದಿಲ್ಲ’ ಎಂದು ಕಳೆದ ಅಕ್ಟೋಬರ್‌ನಲ್ಲಿ ಪಿಟ್ಸ್‌ಬರ್ಗ್‌ನಲ್ಲಿ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರ ಹೇಳಿಕೆಯು ಸೋಲಿನ ನಿರೀಕ್ಷೆಯ ಮಾತುಗಳಾಗಿದ್ದವೇ ಎಂಬುದೂ ಈಗ ಚರ್ಚೆಯಾಗುತ್ತಿದೆ.
ಮತ್ತೊಂದೆಡೆ ಮಿಚಿಗನ್‌ನಲ್ಲಿರುವ ಅರಬ್‌ ಅಮೆರಿಕನ್ನರ ವಿಶ್ವಾಸ ಗಳಿಸುವಲ್ಲೂ ಕಮಲಾ ವಿಫಲರಾದರು. ಗಾಜಾ ಪಟ್ಟಿ ಮೇಲೆ ಇಸ್ರೇಲ್ ದಾಳಿಯಲ್ಲಿ ಬೈಡನ್ ಅವರು ನಿಲುವು ಈ ವರ್ಗದವರ ಅಸಮಾಧಾನಕ್ಕೆ ಕಾರಣವಾಗಿತ್ತು. ಆದರೆ, ಪ್ಲಾಲೆಸ್ಟೀನಿಗಳಿಗೆ ನೆರವು ನೀಡುವ ಜಾಥಾ ನಡೆಸುವ ಮೂಲಕ ಕಮಲಾ ಸ್ವಲ್ಪ ಮಟ್ಟಿಗೆ ಹಾನಿ ಕಡಿಮೆ ಮಾಡುವ ಯತ್ನ ನಡೆಸಿದ್ದರು. ಮತ್ತೊಂದೆಡೆ ಪೆನ್ಸಿಲ್ವೇನಿಯಾದಲ್ಲಿ ಇಸ್ರೇಲ್ ಪರ ಮಾತುಗಳನ್ನಾಡಿ ಸರಿದೂಗಿಸುವ ಯತ್ನ ನಡೆಸಿದರಾದರೂ ಅದು ಕೈಗೂಡಲಿಲ್ಲ. 
ಟ್ರಂಪ್ ಗೆದ್ದರೆ ಪ್ರಜಾಪ್ರಭುತ್ವಕ್ಕೆ ಮಾರಕ ಎಂಬ ಡೆಮಾಕ್ರೆಟಿಕ್ ಪಕ್ಷದ ಕಳವಳ ಅಮೆರಿಕನ್ನರ ನಿರ್ಧಾರವನ್ನು ಕದಲಿಸಲಿಲ್ಲ. ಹೀಗಾಗಿ 2028ರ ಚುನಾವಣೆಗೆ ಡೆಮಾಕ್ರೆಟಿಕ್ ಪಕ್ಷದವರು ಬೇರೆಯೇ ತಂತ್ರವನ್ನು ಹೂಡುವ ಅನಿವಾರ್ಯತೆ ಸೃಷ್ಟಿಯಾಗಿದೆ. ಏಕೆಂದರೆ ಡೆಮಾಕ್ರೆಟಿಕ್ ಪಕ್ಷದವರು ಸೋತಿದ್ದು ಅಧ್ಯಕ್ಷ ಸ್ಥಾನವನ್ನು ಮಾತ್ರವಲ್ಲ, ಬದಲಿಗೆ ಸದನ ಹಾಗೂ ಸೆನಟ್ ಎರಡರಲ್ಲೂ ಪರಾಭವಗೊಂಡಿದ್ದಾರೆ. 

ಅಂತಿಮವಾಗಿ ಅಮೆರಿಕನ್ನರು ಮಹಿಳಾ ಅಧ್ಯಕ್ಷರನ್ನು ಸ್ವೀಕರಿಸಲು ಸಿದ್ಧರಿಲ್ಲದ ಕಾರಣ ಹಾಗೂ ತಮ್ಮ ವರ್ಣದವರಲ್ಲದ ಕಾರಣ ಕಮಲಾ ಅವರ ಸೋಲು ಸಹಜ ಎಂಬಂತಾಗಿದೆ. ಆದರೆ, ಒಂದೊಮ್ಮೆ ಬೈಡನ್ ಅವರೇ ಸ್ಪರ್ಧಿಸಿದ್ದರೂ ಇಷ್ಟು ತುರುಸಿನ ಪೈಪೋಟಿ ನಡೆಯುತ್ತಿರಲಿಲ್ಲ ಎನ್ನುವ ಮಟ್ಟಿಗೆ ಕಮಲಾ ಅವರು ಸ್ಪರ್ಧಿಸಿದ್ದು ಅವರ ಬೆಂಬಲಿಗರ ಆತ್ಮವಿಶ್ವಾಸ ಹೆಚ್ಚಿಸಿದೆ. 

(ಲೇಖಕಿ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಅಮೆರಿಕ ಅಧ್ಯಯನ ವಿಷಯ ಬೋಧಿಸುತ್ತಾರೆ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.