ಇಸ್ಲಾಮಾಬಾದ್: ಪಶ್ಚಿಮ ಅಫ್ಗಾನಿಸ್ತಾನದ ಘೋರ್ ಪ್ರಾಂತ್ಯದಲ್ಲಿ ಭಾರಿ ಮಳೆಯಿಂದ ಹಠಾತ್ ಪ್ರವಾಹ ಉಂಟಾಗಿ 50 ಜನರು ಮೃತಪಟ್ಟಿದ್ದಾರೆ ಎಂದು ತಾಲಿಬಾನ್ ಸರ್ಕಾರದ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದರು.
ಈ ಸಾವಿನ ಸಂಖ್ಯೆ ಪ್ರಾಥಮಿಕ ವರದಿಯನ್ನು ಆಧರಿಸಿದೆ. ಹಲವು ಜನರು ಕಣ್ಮರೆಯಾಗಿದ್ದು, ಮೃತರ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಘೋರ್ ಪ್ರಾಂತೀಯ ಗವರ್ನರ್ ವಕ್ತಾರ ಅಬ್ದುಲ್ ವಾಹಿದ್ ಹಮಾಸ್ ತಿಳಿಸಿದರು.
ಶುಕ್ರವಾರ ಉಂಟಾದ ಈ ಪ್ರವಾಹದ ನಂತರ ರಾಜಧಾನಿ ಫಿರೋಜ್ ಕೋಹ್ ಸೇರಿದಂತೆ ಹಲವು ಕಡೆ ಸಾವಿರಾರು ಮನೆಗಳು ಮತ್ತು ಆಸ್ತಿಗಳಿಗೆ ಹಾನಿ ಉಂಟಾಗಿದೆ. ನೂರಾರು ಹೆಕ್ಟೇರ್ ಕೃಷಿ ಭೂಮಿ ನಾಶವಾಗಿದ್ದು, ಈ ಪ್ರಾಂತ್ಯದಲ್ಲಿ ಅಪಾರ ಆರ್ಥಿಕ ನಷ್ಟ ಆಗಿದೆ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.