ಲಂಡನ್: ದೋಹಾದಿಂದ ಡಬ್ಲಿನ್‌ಗೆ ಭಾನುವಾರ ತೆರಳುತ್ತಿದ್ದ ‘ಕತಾರ್ ಏರ್‌ವೇಸ್’ ವಿಮಾನವು ಟರ್ಬ್ಯುಲೆನ್ಸ್‌ಗೆ ಸಿಲುಕಿ (ಗಾಳಿಯ ತೀವ್ರ ಏರಿಳಿತದಿಂದ ಆಗುವ ಕ್ಷೋಭೆ) ಅಲುಗಾಡಿದ ಪರಿಣಾಮ 12 ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ. ಈ ಪೈಕಿ ಎಂಟು ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.
ಬೋಯಿಂಗ್ 787 ಡ್ರೀಮ್‌ಲೈನರ್ ವಿಮಾನವು ಸುರಕ್ಷಿತವಾಗಿ ಡಬ್ಲಿನ್ ವಿಮಾನ ನಿಲ್ದಾಣದಲ್ಲಿ ಇಳಿಯಿತು. ಈ ವೇಳೆ ವಿಮಾನ ನಿಲ್ದಾಣದ ಪೊಲೀಸರು, ಅಗ್ನಿಶಾಮಕದಳ ಹಾಗೂ ರಕ್ಷಣಾ ಇಲಾಖೆ ವತಿಯಿಂದ ತುರ್ತು ಸೇವೆಗಳನ್ನು ಒದಗಿಸಲಾಯಿತು.
ಟರ್ಕಿ ಮೂಲಕ ಬರುವಾಗ ಈ ಅವಘಡ ನಡೆದಿದೆ. ಪ್ರಯಾಣಿಕರು ವಿಮಾನದ ಚಾವಣಿಗೆ ಡಿಕ್ಕಿ ಹೊಡೆದುಕೊಳ್ಳುವಷ್ಟು ತೀವ್ರವಾಗಿ ಟರ್ಬ್ಯುಲೆನ್ಸ್ ಪರಿಣಾಮ ಇತ್ತು. ಆಹಾರ ಮತ್ತು ನೀರಿನ ಬಾಟಲಿಗಳು ವಿಮಾನದ ತುಂಬೆಲ್ಲಾ ಚೆಲ್ಲಾಪಿಲ್ಲಿಯಾಗಿದ್ದವು ಎಂದು ಪ್ರಯಾಣಿಕರೊಬ್ಬರು ತಿಳಿಸಿದ್ದಾರೆ.
ಸಿಂಗಪುರ ಏರ್‌ಲೈನ್ಸ್ ಕಂಪನಿಯ ವಿಮಾನವೊಂದು ಹಿಂದೂ ಮಹಾಸಾಗರದ ಮೇಲೆ ಸಾಗುತ್ತಿದ್ದಾಗ ತೀವ್ರ ಟರ್ಬುಲೆನ್ಸ್‌ಗೆ ಸಿಲುಕಿ, ಮೂರೇ ನಿಮಿಷಗಳ ಅವಧಿಯಲ್ಲಿ ಆರು ಸಾವಿರ ಅಡಿಗಳಷ್ಟು ಕೆಳಕ್ಕೆ ಕುಸಿದಿದ್ದ ಘಟನೆ ಇತ್ತೀಚೆಗೆ ನಡೆದಿತ್ತು. ಆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಬ್ರಿಟನ್ ಪ್ರಜೆಯೊಬ್ಬರು ಮೃತಪಟ್ಟಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.