ADVERTISEMENT

ಕಾಶ್ಮೀರ ಸಮಸ್ಯೆಯನ್ನು ಭಾರತ–ಪಾಕ್‌ ಪರಿಹರಿಸಿಕೊಳ್ಳಲಿ: ಬ್ರಿಟನ್‌

ಸಂಸತ್ತಿನಲ್ಲಿ ನಡೆದ ಚರ್ಚೆಯಲ್ಲಿ ‘ಆಡಮ್’ ಪ್ರತಿಪಾದನೆ

ಪಿಟಿಐ
Published 14 ಜನವರಿ 2021, 8:06 IST
Last Updated 14 ಜನವರಿ 2021, 8:06 IST
ಆಡಮ್ಸ್‌ಚಿತ್ರ: ಟ್ವಿಟರ್ ಖಾತೆ
ಆಡಮ್ಸ್‌ಚಿತ್ರ: ಟ್ವಿಟರ್ ಖಾತೆ   

ಲಂಡನ್‌: ದೀರ್ಘಕಾಲದಿಂದ ಉಳಿದುಕೊಂಡಿರುವ ಕಾಶ್ಮೀರ ಸಮಸ್ಯೆಯನ್ನು ಪರಿಹರಿಸಲು ಭಾರತ ಮತ್ತು ಪಾಕಿಸ್ತಾನ ರಾಷ್ಟ್ರಗಳು ಶಾಶ್ವತವಾದ ರಾಜಕೀಯ ನಿರ್ಣಯವನ್ನು ಕೈಗೊಳ್ಳಬೇಕು ಎಂದು ಒತ್ತಿ ಹೇಳಿದ ಬ್ರಿಟನ್‌ ಸರ್ಕಾರ, ಈ ವಿಚಾರದಲ್ಲಿ ತಾನು ಮಧ್ಯಸ್ಥಿಕೆವಹಿಸಲು ಸಾಧ್ಯವಿಲ್ಲ ಎಂದು ಹೇಳಿದೆ.

‘ಕಾಶ್ಮೀರದ ರಾಜಕೀಯ ಪರಿಸ್ಥಿತಿ‘ ಕುರಿತು ಬ್ರಿಟನ್‌ ಸಂಸತ್ತಿನಲ್ಲಿ ನಡೆದ ಚರ್ಚೆಗೆ ಪ್ರತಿಕ್ರಿಯಿಸಿದ ವಿದೇಶಿ, ಕಾಮನ್ವೆಲ್ತ್ ಮತ್ತು ಅಭಿವೃದ್ಧಿ ಕಚೇರಿ (ಎಫ್‌ಸಿಡಿಒ) ಸಚಿವ ನಿಗೆಲ್ ಆಡಮ್ಸ್, ‘ಕಾಶ್ಮೀರದ ನಿಯಂತ್ರಣ ರೇಖೆಯ (ಎಲ್‌ಒಸಿ) ಎರಡೂ ಬದಿಗಳಲ್ಲಿರುವ ಮಾನವ ಹಕ್ಕುಗಳ ಕುರಿತು ತೋರಬೇಕಿರುವ ಕಾಳಜಿಯನ್ನು ಒಪ್ಪಿಕೊಂಡ ಅವರು, ದ್ವಿಪಕ್ಷೀಯ ವಿಷಯದಲ್ಲಿ ಬ್ರಿಟನ್ ಯಾವುದೇ ಮಧ್ಯಸ್ಥಿಕೆಯ ಪಾತ್ರವನ್ನು ವಹಿಸುವುದಿಲ್ಲ ಎಂದು ಒತ್ತಿ ಹೇಳಿದರು.

‘ಕಾಶ್ಮೀರ ವಿಚಾರದಲ್ಲಿ ನಮ್ಮ ಸರ್ಕಾರದ ನಿಲುವಿನಲ್ಲಿ ಯಾವುದೇ ಬದಲಾವಣೆಯಲ್ಲ. ಆದರೆ, ಕಾಶ್ಮೀರದ ಜನರ ಹಿತಾಸಕ್ತಿ ಮತ್ತು ಆಶಯಗಳಿಗೆ ಅನುಗುಣವಾಗಿ ಎರಡೂ ರಾಷ್ಟ್ರಗಳು ಸೂಕ್ತ ರಾಜಕೀಯ ನಿರ್ಣಯವನ್ನು ಕಂಡುಕೊಳ್ಳುತ್ತವೆ ಎಂಬ ವಿಶ್ವಾಸವಿದೆ‘ ಎಂದು ಆಡಮ್ಸ್‌ ಹೇಳಿದರು.

ADVERTISEMENT

‘ಈ ವಿಚಾರದಲ್ಲಿ ಬ್ರಿಟನ್ ಸರ್ಕಾರ ಪರಿಹಾರ ಸೂಚಿಸುವುದಾಗಲಿ ಅಥವಾ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುವುದು ಸೂಕ್ತವಲ್ಲ‘ ಎಂದು ಅವರು ಪ್ರತಿಪಾದಿಸಿದರು.

ಲಂಡನ್‌ನ ಹೌಸ್ ಆಫ್ ಕಾಮನ್ಸ್‌ ವೆಸ್ಟ್‌ ಮಿನಿಸ್ಟರ್ ಹಾಲ್‌ನಲ್ಲಿ ನಡೆದ ಈ ಚರ್ಚೆಯ ಕೊನೆಯಲ್ಲಿ, ಕಳೆದ ವರ್ಷ ಡಿಸೆಂಬರ್‌ನಲ್ಲಿ ಕಾಶ್ಮೀರದಲ್ಲಿ ನಡೆದ ಜಿಲ್ಲಾ ಅಭಿವೃದ್ಧಿ ಮಂಡಳಿ (ಡಿಡಿಸಿ) ಚುನಾವಣೆಯನ್ನೂ ಸಚಿವರು ಪ್ರಸ್ತಾಪಿಸಿದರು. ಲೇಬರ್ ಪಕ್ಷದ ಸಂಸದ ಬ್ಯಾರಿ ಗಾರ್ಡಿನರ್ ಈ ಚುನಾವಣೆ ಬಗ್ಗೆ ಗಮನಸೆಳೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.