ಲಾಹೋರ್: ನಿಷೇಧಿತ ಜಮಾತ್ ಉದ್ ದಾವಾ (ಜೆಯುಡಿ) ಸಂಘಟನೆಯ ಮುಖ್ಯಸ್ಥ, 2008ರ ಮುಂಬೈನ ಉಗ್ರರ ದಾಳಿ ಪ್ರಕರಣದ ಸೂತ್ರಧಾರಿ ಹಫೀಜ್ ಸಯೀದ್ ನಿವಾಸದ ಬಳಿ ನಡೆದಿದ್ದ ಬಾಂಬ್ ಸ್ಫೋಟ ಪ್ರಕರಣದ ಸಂಬಂಧ ಪಾಕ್‌ನ ಭದ್ರತಾ ಸಂಸ್ಥೆಯ ಅಧಿಕಾರಿಗಳು ವಿದೇಶಿಯೊಬ್ಬರನ್ನು ಬಂಧಿಸಿದ್ದಾರೆ.
ಲಾಹೋರ್ ವಿಮಾನ ನಿಲ್ದಾಣದಲ್ಲಿ ಪೀಟರ್ ಪಾಲ್ ಡೇವಿಡ್ ಎಂಬಾತನನ್ನು ಬಂಧಿಸಿದ್ದು, ಬಳಿಕ ವಿಚಾರಣೆಗಾಗಿ ಗೌಪ್ಯ ಸ್ಥಳಕ್ಕೆ ಕರೆದೊಯ್ಯಲಾಗಿದೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ. ಸ್ಫೋಟಕ್ಕೆ ಬಳಸಲಾಗಿದ್ದ ಕಾರಿನ ಮಾಲೀಕ ಡೇವಿಡ್ ಎನ್ನಲಾಗಿದೆ.
ಇವರು ನಿಯಮಿತವಾಗಿ ಲಾಹೋರ್, ಕರಾಚಿ ಮತ್ತು ದುಬೈ ನಡುವೆ ಪ್ರಯಾಣಿಸಿರುವುದು ಗೊತ್ತಾಗಿದೆ. ಆದರೆ, ಇದಕ್ಕೆ ಪೂರಕ ಸಮರ್ಥನೆಯನ್ನು ಆತ ವಿಚಾರಣೆಯಲ್ಲಿ ನೀಡಿಲ್ಲ ಎಂದು ವರದಿ ತಿಳಿಸಿದೆ.
ಲಾಹೋರ್‌ನ ಜೋಹರ್ ಟೌನ್ ಸಯೀದ್ ನಿವಾಸದ ಬಳಿ ನಡೆದಿದ್ದ ಸ್ಫೋಟದಲ್ಲಿ ಮೂವರು ಸತ್ತಿದ್ದು, 17 ಮಂದಿ ಗಾಯಗೊಂಡಿದ್ದರು. ಸ್ಫೋಟದ ಹೊಣೆಯನ್ನು ಇದುವರೆಗೂ ಯಾವುದೇ ಸಂಘಟನೆ ಹೊತ್ತುಕೊಂಡಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.