ಕೊಲೊಂಬೊ: ಆರ್ಥಿಕತೆ ದುರ್ಬಲಗೊಳಿಸುವ ವಿದೇಶಿ ವಿನಿಮಯದ ಕೊರತೆಯಿಂದಾಗಿ ಇಂಧನ ಖರೀದಿಸಲು ದ್ವೀಪ ರಾಷ್ಟ್ರ ಶ್ರೀಲಂಕಾ ಪರದಾಡುತ್ತಿದೆ.
ದೇಶದಾದ್ಯಂತ ಇಂಧನ ಭರ್ತಿ ಮಾಡುವ ಹೆಚ್ಚಿನ ಸ್ಟೇಷನ್‌ಗಳಲ್ಲಿ ಪಂಪ್‌ಗಳು ಬರಿದಾಗಿವೆ. ಇಂಧನ ಖರೀದಿಸಲು ಹಣದ ಕೊರತೆಯಿದೆ ಎಂದು ಶ್ರೀಲಂಕಾ ಸರ್ಕಾರ ಸೋಮವಾರ ಒಪ್ಪಿಕೊಂಡಿದೆ.
ಶ್ರೀಲಂಕಾದ ಸದ್ಯದ ಆರ್ಥಿಕ ಪರಿಸ್ಥಿತಿ ಎಷ್ಟು ಭೀಕರವಾಗಿದೆ ಎಂದರೆ ಎರಡು ಹಡಗುಗಳ ಇಂಧನಕ್ಕೆ ಪಾವತಿಸಲು ಸಾಕಾಗುವಷ್ಟು ಹಣ ಸಹ ಇಲ್ಲದಂತಾಗಿದೆ.
‘ಇಂಧನ ತುಂಬಿರುವ ಎರಡು ಹಡಗುಗಳುಇಂದು ಬಂದಿವೆ. ಆದರೆ, ಇಂಧನಕ್ಕೆ ಪಾವತಿಸಲು ನಮಗೆ ಸಾಧ್ಯವಾಗುತ್ತಿಲ್ಲ’ ಎಂದು ಶ್ರೀಲಂಕಾದ ಇಂಧನ ಸಚಿವ ಉದಯ ಗಮ್ಮನ್‌ಪಿಲಾ ಸೋಮವಾರ ಹೇಳಿದ್ದಾರೆ.
ಕಳೆದ ವಾರ ಸರ್ಕಾರಿ ಸ್ವಾಮ್ಯದರಿಫೈನರಿ ಸಿಲೋನ್ ಪೆಟ್ರೋಲಿಯಂ ಕಾರ್ಪೊರೇಷನ್ (ಸಿಪಿಸಿ) ವಿದೇಶದಿಂದ ಆಮದಾಗಿರುವ ಇಂಧನವನ್ನು ಇಳಿಸಿಕೊಳ್ಳಲು ಹಣವಿಲ್ಲ ಎಂದು ಹೇಳಿತ್ತು.
2021ರಲ್ಲಿ ಸರ್ಕಾರವು ನಿಗದಿಪಡಿಸಿದ ಬೆಲೆಯಲ್ಲಿ ಡೀಸೆಲ್ ಮಾರಾಟದಿಂದಾಗಿ ಸುಮಾರು ಮೂರು ಸಾವಿರ ಕೋಟಿ ರೂಪಾಯಿ ನಷ್ಟ ಅನುಭವಿಸಿದೆ.
‘ಡಾಲರ್ ಬಿಕ್ಕಟ್ಟಿನಿಂದ ಮುಂಬರಲಿರುವ ಇಂಧನ ಕೊರತೆಯ ಬಗ್ಗೆ ನಾನು ಜನವರಿಯಲ್ಲಿ ಎರಡು ಬಾರಿ ಮತ್ತು ಈ ತಿಂಗಳ ಆರಂಭದಲ್ಲಿ ಒಮ್ಮೆ ಎಚ್ಚರಿಸಿದ್ದೆ’ ಎಂದು ಗಮ್ಮನ್‌ಪಿಲಾ ಹೇಳಿದರು.
ಇಂಧನ ಚಿಲ್ಲರೆ ಮಾರಾಟ ಬೆಲೆ ಹೆಚ್ಚಿಸುವುದು ಈ ಅವ್ಯವಸ್ಥೆಯಿಂದ ಹೊರಬರುವ ಏಕೈಕ ಮಾರ್ಗವಾಗಿದೆ. ಸಾರ್ವಜನಿಕರಿಗೆ ಅನುಕೂಲವಾಗುವಂತೆ ಇಂಧನ ಆಮದು ಮೇಲಿನ ಅಬಕಾರಿ ಸುಂಕ ಕಡಿಮೆ ಮಾಡಬೇಕೆಂದು ಸಚಿವರು ಸರ್ಕಾರವನ್ನು ಒತ್ತಾಯಿಸಿದರು.
ಶ್ರೀಲಂಕಾದ ಆರ್ಥಿಕ ಪರಿಸ್ಥಿತಿ ಹದಗೆಡುಸುತ್ತಿರುವ ವಿದೇಶಿ-ವಿನಿಮಯ ಕೊರತೆಯು ಇಂಧನ ಕ್ಷೇತ್ರದ ಮೇಲೆ ಗಂಭೀರ ಪರಿಣಾಮ ಬೀರಿದೆ. ಇಂಧನ ಕೊರತೆಯಿಂದಾಗಿ ದೇಶದಾದ್ಯಂತ ಪೆಟ್ರೋಲ್ ಬಂಕ್‌ಗಳ ಮುಂದೆ ಜನರು ದೀರ್ಘ ಸರತಿ ಸಾಲಿನಲ್ಲಿ ನಿಂತಿರುವ ದೃಶ್ಯಗಳು ಸಾಮಾನ್ಯವಾಗಿವೆ.
ಬರಿದಾದ ವಿದೇಶಿ ವಿನಿಮಯದಿಂದ ಹದಗೆಟ್ಟ ಆರ್ಥಿಕ ಬಿಕ್ಕಟ್ಟಿನಲ್ಲಿ ತುರ್ತು ಇಂಧನ ಅವಶ್ಯಕತೆಗಳನ್ನು ಪೂರೈಸಲು ಶ್ರೀಲಂಕಾವು ಕಳೆದ ತಿಂಗಳು ಭಾರತದ ಪ್ರಮುಖ ತೈಲ ಕಂಪನಿ ಇಂಡಿಯನ್ ಆಯಿಲ್ ಕಾರ್ಪೊರೇಶನ್‌ನಿಂದ 40,000 ಮೆಟ್ರಿಕ್ ಟನ್ ಡೀಸೆಲ್ ಮತ್ತು ಪೆಟ್ರೋಲ್ ಖರೀದಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.