ಇಸ್ಲಾಂಬಾದ್ : ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮತ್ತು ಅವರ ಪತ್ನಿ ಬುಶ್ರಾ ಬೀಬಿ ಇಸ್ಲಾಂ ಧರ್ಮದ ‘ಷರಿಯಾ ಕಾನೂನಿನ‘ ವಿರುದ್ಧವಾಗಿ ಮದುವೆಯಾಗಿದ್ದಾರೆ ಎಂದು ಇಮ್ರಾನ್ ಖಾನ್ ಮದುವೆ ನೆರವೇರಿಸಿಕೊಟ್ಟಿದ್ದ ಇಸ್ಲಾಂ ಧರ್ಮಗುರು ಮುಫ್ತಿ ಮೊಹಮ್ಮದ್ ಸಯೀದ್ ನ್ಯಾಯಾಲಯಕ್ಕೆ ತಿಳಿಸಿದ್ದು, ಇದೀಗ ಮಾಜಿ ಪ್ರಧಾನಿ ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ.
ಮಹಮ್ಮದ್ ಹಮೀದ್ ಎಂಬುವವರು ‘ಇದಾತ್ ನಲ್ಲಿರುವ ವೇಳೆ ಇಮ್ರಾನ್ ಖಾನ್ ಬುಶ್ರಾ ಬೀಬಿ ಅವರನ್ನು ಮದುವೆಯಾಗಿದ್ದಾರೆ. ಆ ಮೂಲಕ ಇಸ್ಲಾಂ ಕಾನೂನು ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಇಮ್ರಾನ್ ಖಾನ್ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು‘ ನ್ಯಾಯಲಯಕ್ಕೆ ದೂರು ನೀಡಿದ್ದರು. ಈ ಪ್ರಕರಣವನ್ನು ಕೈಗೆತ್ತಿಗೊಂಡ ನ್ಯಾಯಾಲಯ ಇಮ್ರಾನ್ ಮದುವೆ ನೆರವೇರಿಸಿದ್ದ ಧರ್ಮಗುರುಗಳಾದ ಮುಫ್ತಿ ಮೊಹಮ್ಮದ್ ಸಯೀದ್ ಅವರಲ್ಲಿ ಸಾಕ್ಷ್ಯ ಕೇಳಿದೆ. ಈ ವೇಳೆ ‘ಷರಿಯಾ ಕಾನೂನು‘ ಪ್ರಕಾರ ಮದುವೆ ನಡೆದಿಲ್ಲ ಎಂದು ಸಯೀದ್ ಒಪ್ಪಿಕೊಂಡಿದ್ದಾರೆ.
‘ಜನವರಿ 1, 2018ರಲ್ಲಿ ಲಾಹೋರ್‌ನಲ್ಲಿ ಇಮ್ರಾನ್ ಖಾನ್ ಮತ್ತು ಬುಶ್ರಾ ಅವರ ಮದುವೆ ನಡೆದಿದೆ. ಮದುವೆಗೆ ಮೊದಲು ಅವರಲ್ಲಿ ಎಲ್ಲ ಮಾಹಿತಿಯನ್ನು ಕೇಳಿದ್ದೆ. ಬುಶ್ರಾ ತಂಗಿಯೆಂದು ಪರಿಚಯ ಮಾಡಿಕೊಂಡ ಮಹಿಳೆಯ ಬಳಿ ಬುಶ್ರಾ ವಿಚ್ಚೇಧನ ಸಂಬಂಧಪಟ್ಟಂತೆ ಮಾಹಿತಿ ಕೇಳಿದ್ದೆ. ಆಗ ಅವರು ಷರಿಯಾ ಕಾನೂನಿನ ಪ್ರಕಾರ ಎಲ್ಲವೂ ಮುಗಿದಿದೆ ಎಂದು ಹೇಳಿದ್ದರು. ಅದಾದ ಮೇಲೆಯೇ ಇಬ್ಬರ ಮದುವೆ ಮಾಡಿಸಿದ್ದೆ‘ ಎಂದರು.
‘ಇದಾದ ಬಳಿಕ ಫೆಬ್ರವರಿಯಲ್ಲಿ ಇಮ್ರಾನ್ ಖಾನ್ ಮತ್ತೆ ಕರೆ ಮಾಡಿ ಮೊದಲ ಮದುವೆ ಷರಿಯಾ ಕಾನೂನಿ ಪ್ರಕಾರ ನಡೆದಿಲ್ಲ. ಈಗ ಮತ್ತೊಮ್ಮೆ ವಿವಾಹ ನೆರವೇರಿಸಿಕೊಡಬೇಕೆಂದು ಕೇಳಿಕೊಂಡಿದ್ದರು‘ ಎಂದು ನ್ಯಾಯಾಲಕ್ಕೆ ಸಯೀದ್ ತಿಳಿಸಿದ್ದಾರೆ.
‘ಹೊಸ ವರ್ಷದಲ್ಲಿ(ಜನವರಿ 1, 2018) ಬುಶ್ರಾ ಬಿಬಿ ಅವರನ್ನು ಮದುವೆಯಾದರೆ ತಾನು ಮತ್ತೊಮ್ಮೆ ಪಾಕಿಸ್ತಾನದ ಪ್ರಧಾನಿಯಾಗುತ್ತೇನೆ ಎಂಬ ಭವಿಷ್ಯವಾಣಿಯನ್ನು ನಂಬಿ ಇಮ್ರಾನ್ ಖಾನ್ ಮತ್ತು ಬುಶ್ರಾ ಬೀಬಿ ಇಸ್ಲಾಂ ಕಾನೂನಿನ ವಿರುದ್ಧವಾಗಿ ಮದುವೆಯಾಗಿದ್ದರು‘ ಎಂದು ಸಯೀದ್ ಹೇಳಿದ್ದಾರೆ.
ಇದಾತ್ ಎಂದರೇನು?
ಇದಾತ್ ಎನ್ನುವುದು ಇಸ್ಲಾಂ ಧರ್ಮದ ಒಂದು ಕಾನೂನಾಗಿದೆ. ಒಬ್ಬ ಮಹಿಳೆ ಗಂಡ ಸತ್ತ ಮೇಲೆ ಅಥವಾ ವಿಚ್ಚೇಧನ ಪಡೆದ ಮೇಲೆ ಮೂರು ತಿಂಗಳ ಕಾಲ ಮರು ಮದುವೆಯಾಗಬಾರದು ಎಂದು ಈ ಕಾನೂನು ಹೇಳುತ್ತದೆ. ಈ ಕಾನೂನನ್ನು ಉಲ್ಲಂಘಿಸಿ ಮದುವೆಯಾಗುವುದು ಇಸ್ಲಾಂ ಕಾನೂನಿನಲ್ಲಿ ದೊಡ್ಡ ಅಪರಾಧವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.