ADVERTISEMENT

ಮಾಜಿ ಪಾಕ್‌ ಸಚಿವೆ ಶಿರೀನ್‌ ಮಝರಿ ಮೇಲೆ ಪೊಲೀಸರಿಂದ ಹಲ್ಲೆ, ಬಂಧನ

ಪಿಟಿಐ
Published 22 ಮೇ 2022, 9:32 IST
Last Updated 22 ಮೇ 2022, 9:32 IST
ಮಾಜಿ ಸಚಿವೆ ಶಿರೀನ್‌ ಮಝರಿ ಅವರ ಪುತ್ರಿ ಇಮಾನ್‌ ಝಾಯ್‌ನಬ್‌ ಮಝರಿ (ಟ್ವಿಟರ್‌ ಚಿತ್ರ)
ಮಾಜಿ ಸಚಿವೆ ಶಿರೀನ್‌ ಮಝರಿ ಅವರ ಪುತ್ರಿ ಇಮಾನ್‌ ಝಾಯ್‌ನಬ್‌ ಮಝರಿ (ಟ್ವಿಟರ್‌ ಚಿತ್ರ)   

ಇಸ್ಲಮಾಬಾದ್‌: ಪಾಕಿಸ್ತಾನದ ಮಾನವ ಹಕ್ಕುಗಳ ಖಾತೆಯ ಮಾಜಿ ಸಚಿವೆ ಶಿರೀನ್‌ ಮಝರಿ ಅವರ ಮೇಲೆ ಹಲ್ಲೆ ನಡೆಸಿದ ಪೊಲೀಸರು ಬಳಿಕ ಠಾಣೆಗೆ ಕರೆದೊಯ್ದಿದ್ದಾರೆ ಎಂದು ಅವರ ಮಗಳು ಶನಿವಾರ ಹೇಳಿದ್ದಾರೆ.

ಇಮ್ರಾನ್‌ ಖಾನ್‌ ನೇತೃತ್ವದ ಸರಕಾರದಲ್ಲಿ ಮಾನವ ಹಕ್ಕುಗಳ ಖಾತೆಯ ಸಚಿವರಾಗಿ ಮಝರಿ ಕಾರ್ಯನಿರ್ವಹಿಸುತ್ತಿದ್ದರು. ಕಳೆದ ತಿಂಗಳು ಅವಿಶ್ವಾಸ ನಿರ್ಣಯದ ಮೂಲಕ ಇಮ್ರಾನ್‌ ಅವರನ್ನು ಕೆಳಗಿಳಿಸಿದ ವಿಚಾರವಾಗಿ ಪಾಕಿಸ್ತಾನ ಸೇನೆಯನ್ನು ಕಟುವಾಗಿ ಟೀಕಿಸುತ್ತಿದ್ದರು.

ಭೂವಿವಾದಕ್ಕೆ ಸಂಬಂಧಿಸಿ ಇದೇ ಮಾರ್ಚ್‌ ತಿಂಗಳಲ್ಲಿ ಮಝರಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದರು. ಅದೇ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆ ಇದಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಆದರೆ ಮಝರಿ ವಿರುದ್ಧದ ಪ್ರಕರಣದ ಕುರಿತಾಗಿ ಅಧಿಕೃತ ವರದಿ ಹೊರಬೀಳಬೇಕಿದೆ.

ADVERTISEMENT

'ಪುರುಷ ಪೊಲೀಸ್‌ ಅಧಿಕಾರಿಗಳು ತಾಯಿಯ ಮೇಲೆ ಹಲ್ಲೆ ನಡೆಸಿದರು. ಬಳಿಕ ಠಾಣೆಗೆ ಕರೆದೊಯ್ದರು. ಲಾಹೋರ್‌ನ ಭ್ರಷ್ಟಾಚಾರ ನಿಗ್ರಹ ದಳದವರು ಎಂದು ಹೇಳಿದರು' ಎಂದು ಮಝರಿ ಅವರ ಮಗಳು ಇಮಾನ್‌ ಝಾಯ್‌ನಬ್‌ ಮಝರಿ ಹೇಳಿದ್ದಾರೆ.

ಮಝರಿ ಅವರನ್ನು ಬಂಧಿಸಿಡಲಾಗಿರುವ ಇಸ್ಲಮಾಬಾದ್‌ನ ಕೋಶಾರ್‌ ಪೊಲೀಸ್‌ ಠಾಣೆಗೆ ಧಾವಿಸುವಂತೆ ಪಾಕಿಸ್ತಾನ್‌ ತೆಹ್ರೀಕ್‌ ಇ ಇನ್ಸಾಫ್‌ (ಪಿಟಿಐ) ಪಕ್ಷದ ಕಾರ್ಯಕರ್ತರಿಗೆ ಪ್ರಧಾನಿಗೆ ಮಾಜಿ ವಿಶೇಷ ಕಾರ್ಯದರ್ಶಿಯಾಗಿದ್ದ ಶೆಹಬಾಜ್‌ ಗಿಲ್‌ ಕರೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.