ಇಸ್ಲಾಮಾಬಾದ್: ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರ ತೆಹ್ರೀಕ್–ಇ–ಇನ್ಸಾಫ್(ಪಿಟಿಐ) ಪಕ್ಷದ ಕಾರ್ಯಕರ್ತರು ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಮೇಲೆ ಲಂಡನ್‌ನಲ್ಲಿ ಹಲ್ಲೆ ನಡೆಸಿದ್ದು, ಆರೋಪಿಗಳ ಬಂಧನಕ್ಕೆ ಪ್ರಯತ್ನಗಳು ನಡೆಯುತ್ತಿವೆ ಎಂದು ಪಾಕಿಸ್ತಾನದ ಪತ್ರಕರ್ತರೊಬ್ಬರು ಶನಿವಾರ ತಿಳಿಸಿದ್ದಾರೆ.
ಇಮ್ರಾನ್ ವಿರುದ್ಧ ಮಂಡಿಸಿರುವ ಅವಿಶ್ವಾಸ ನಿರ್ಣಯಕ್ಕೆ ಸಂಸತ್ತಿನಲ್ಲಿ ಇಂದು ಮತದಾನ ನಡೆಯಲಿದೆ.
ಇದಕ್ಕೂ ಮುನ್ನ ಪ್ರತಿಪಕ್ಷಗಳ ಮೇಲಿನ ವಾಗ್ದಾಳಿಯನ್ನು ಮುಂದುವರಿಸಿದ್ದ ಇಮ್ರಾನ್ ಖಾನ್ ಅವರು, ವಿರೋಧ ಪಕ್ಷದ ನಾಯಕ ಮತ್ತು ಪಿಎಂಎಲ್-ಎನ್ ನಾಯಕ ಶೆಹಬಾಜ್ ಷರೀಫ್ (ನವಾಜ್ ಷರೀಫ್ ಅವರ ಸಹೋದರ) ಅಧಿಕಾರ ವಹಿಸಿಕೊಂಡರೆ, 'ಅವರು ಅಮೆರಿಕದ ಗುಲಾಮಗಿರಿಯನ್ನು ಮಾಡುತ್ತಾರೆ' ಎಂದು ದೂರಿದ್ದರು.
ಪಾಕಿಸ್ತಾನ ಮೂಲದ ಡಿಜಿಟಲ್ ಮಾಧ್ಯಮ ಫ್ಯಾಕ್ಟ್ ಫೋಕಸ್‌ನ ಪಾಕಿಸ್ತಾನಿ ಪತ್ರಕರ್ತ ಅಹ್ಮದ್ ನೂರಾನಿ ಟ್ವೀಟ್ ಮಾಡಿದ್ದು, 'ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರು ಲಂಡನ್‌ನಲ್ಲಿ ಪಿಟಿಐ ಕಾರ್ಯಕರ್ತನಿಂದ ಹಲ್ಲೆಗೊಳಗಾಗಿದ್ದಾರೆ. ಪಿಟಿಐ ವಿರುದ್ಧ ಪಾಕಿಸ್ತಾನದಲ್ಲಿ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
'ಪಕ್ಷವು ಎಲ್ಲಾ ಮಿತಿಗಳನ್ನು ಮೀರಿದೆ. ದೈಹಿಕ ಹಿಂಸೆಯನ್ನು ಎಂದಿಗೂ ಕ್ಷಮಿಸಲು ಸಾಧ್ಯವಿಲ್ಲ ಎಂಬುದಕ್ಕೆ ಪಿಟಿಐ ಅನ್ನು ಉದಾಹರಣೆಯನ್ನಾಗಿ ಮಾಡಬೇಕು. ದಾಳಿಯಲ್ಲಿ ನವಾಜ್ ಷರೀಫ್ ಅವರ ಸಿಬ್ಬಂದಿ ಗಾಯಗೊಂಡಿದ್ದಾರೆ' ಎಂದು ಹೇಳಿದ್ದಾರೆ.
ಇಮ್ರಾನ್ ಖಾನ್ ಅವರ ಸರ್ಕಾರ 'ಬಹುಮತವನ್ನು ಕಳೆದುಕೊಂಡಿದೆ' ಮತ್ತು ಶೆಹಬಾಜ್ ಷರೀಫ್ ಅವರು ಮುಂದಿನ ಪ್ರಧಾನಿಯಾಗುತ್ತಾರೆ ಎಂದು ವಿರೋಧ ಪಕ್ಷಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.