ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಹಾಗೂ ಮಹ್ಮೂದ್ ಖಾನ್ ಅಚಕ್‌ಜಾಯಿ ಅವರು ಮಾರ್ಚ್ 9ರಂದು ನಡೆಯಲಿರುವ ಅಧ್ಯಕ್ಷೀಯ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದಾರೆ.
ಸಿಂಧ್ ಪ್ರಾಂತ್ಯದವರಾಗಿರುವ 68 ವರ್ಷದ ಜರ್ದಾರಿ, ಪಾಕಿಸ್ತಾನ್ ಪೀಪಲ್ಸ್ ಪಾರ್ಟಿಯ ಸಹ ಅಧ್ಯಕ್ಷರಾಗಿದ್ದು, ಅವರಿಗೆ ಮೈತ್ರಿ ಪಕ್ಷ ಪಾಕಿಸ್ತಾನ್ ಮುಸ್ಲಿಂ ಲೀಗ್– ನವಾಜ್ ಬೆಂಬಲ ಇದೆ. ಇವೆರಡು ಪಕ್ಷಗಳು ಸೇರಿಕೊಂಡು ಸರ್ಕಾರ ರಚಿಸಿವೆ. ಎಲೆಕ್ಟರಲ್ ಕಾಲೇಜ್‌ನಲ್ಲಿ ಈ ಪಕ್ಷಗಳಿಗೆ ಬಹುಮತ ಇರುವುದರಿಂದ ಜರ್ದಾರಿ ಎರಡನೇ ಬಾರಿ ಅಧ್ಯಕ್ಷರಾಗಿ ಆಯ್ಕೆಯಾಗುವುದು ಖಚಿತ. ಈ ಹಿಂದೆ 2008–2013ರ ಅವಧಿಯಲ್ಲಿ ಜರ್ದಾರಿ ಅಧ್ಯಕ್ಷರಾಗಿದ್ದರು.
75 ವರ್ಷದ ಅಚಕ್‌ಜಾಯಿ ಬಲೂಚಿಸ್ತಾನದವರಾಗಿದ್ದು, ಪಸ್ತುಂಖ್ವಾ ಮಿಲ್ಲಿ ಅವಾಮಿ ಪಾರ್ಟಿಯ ಮುಖ್ಯಸ್ಥರಾಗಿದ್ದಾರೆ. ಅವರನ್ನು ಜೈಲಿನಲ್ಲಿರುವ ಪಾಕಿಸ್ತಾನ್ ತೆಹ್ರಿಕ್–ಎ–ಇನ್ಸಾಫ್ ಪಕ್ಷದ ನಾಯಕ ಇಮ್ರಾನ್ ಖಾನ್ ನಾಮನಿರ್ದೇಶನ ಮಾಡಿದ್ದಾರೆ. ಅಚಕ್‌ಜಾಯಿ ಅವರಿಗೆ ಸುನ್ನಿ ಇತ್ತೆಹಾದ್ ಕೌನ್ಸಿಲ್ ಪಕ್ಷದ ಬೆಂಬಲ ಇದೆ.
ಸೋಮವಾರ ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಮಾರ್ಚ್ 9ಕ್ಕೆ ಮತದಾನ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.