ವ್ಯಾಟಿಕನ್ ಸಿಟಿ: ವಿಶ್ರಾಂತ ಪೋಪ್ 16ನೇ ಬೆನೆಡಿಕ್ಟ್ (95) ಅವರು ಶನಿವಾರ ನಿಧನರಾಗಿದ್ದಾರೆ ಎಂದು ವ್ಯಾಟಿಕನ್ ವಕ್ತಾರ ಮ್ಯಾಥ್ಯೂ ಬ್ರೂನಿ ಹೇಳಿದ್ದಾರೆ.
ಬೆನೆಡಿಕ್ಟ್ ಅವರು ವ್ಯಾಟಿಕನ್‌ನ ಮೇಟರ್ ಎಕ್ಲೇಸಿಯಾ ಮಠದಲ್ಲಿ ನಿಧನರಾದರು ಎಂದೂ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಜರ್ಮನಿಯ ದೇವತಾಶಾಸ್ತ್ರಜ್ಞರಾಗಿದ್ದ ಬೆನೆಡಿಕ್ಟ್ ಅವರು 600 ವರ್ಷಗಳ ಇತಿಹಾಸದಲ್ಲೇ ಪೋಪ್ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಮೊದಲ ವ್ಯಕ್ತಿಯಾಗಿದ್ದಾರೆ. 2013ರಲ್ಲಿ ಅವರು ಆ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಅವರ ಪಾರ್ಥಿವ ಶರೀರವನ್ನು ಸೇಂಟ್ ಪೀಟರ್ಸ್ ಬೆಸಿಲಿಕಾದಲ್ಲಿ ಸೋಮವಾರ ಬೆಳಿಗ್ಗೆಯಿಂದ ಸಾರ್ವಜನಿಕರ ದರ್ಶನಕ್ಕೆ ಇರಿಸಲಾಗುವುದು ಎಂದೂ ಮ್ಯಾಥ್ಯೂ ಬ್ರೂನಿ ಹೇಳಿದ್ದಾರೆ.
ಬೆನೆಡಿಕ್ಟ್ ಅವರ ಆರೋಗ್ಯ ಸ್ಥಿತಿ ದೀರ್ಘಕಾಲದಿಂದ ಹದಗೆಟ್ಟಿದ್ದರೂ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂಬ ವಿಚಾರವನ್ನು ವ್ಯಾಟಿಕನ್ ಬುಧವಾರವಷ್ಟೇ ಬಹಿರಂಗಪಡಿಸಿತ್ತು.
ಬೆನೆಡಿಕ್ಟ್ ಅವರ ಅಂತ್ಯಕ್ರಿಯೆಯು ಜನವರಿ 5ರಂದು ಸೇಂಟ್ ಪೀಟರ್ಸ್ ಸ್ಕ್ವೇರ್‌ನಲ್ಲಿ ಪೋಪ್ ಫ್ರಾನ್ಸಿಸ್ ಅವರ ನೇತೃತ್ವದಲ್ಲಿ ನಡೆಯಲಿದೆ ಎಂದು ವ್ಯಾಟಿಕನ್ ವಕ್ತಾರರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.