ವಾಷಿಂಗ್ಟನ್: ಅಮೆರಿಕಾದ ಮಾಜಿ ವಿದೇಶಾಂಗ ಕಾರ್ಯದರ್ಶಿ, ರಾಜತಾಂತ್ರಿಕ, ನೊಬೆಲ್ ಶಾಂತಿ ಪುರಸ್ಕೃತ ಹೆನ್ರಿ ಕಿಸ್ಸಿಂಜರ್(100) ನಿಧನರಾಗಿದ್ದಾರೆ.
ದಶಕಗಳ ಸುದೀರ್ಘ ವೃತ್ತಿಜೀವನದಲ್ಲಿ ಅವರು ರಿಚರ್ಡ್ ನಿಕ್ಸನ್ ಮತ್ತು ಜೆರಾಲ್ಡ್ ಫೋರ್ಡ್ (ಅಮೆರಿಕಾದ ಮಾಜಿ ಅಧ್ಯಕ್ಷರು) ಅವಧಿಯಲ್ಲಿ ಅಮೆರಿಕದ ಉನ್ನತ ರಾಜತಾಂತ್ರಿಕ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದರು.
ಜರ್ಮನ್ ಮೂಲದವರಾದ ಕಿಸ್ಸಿಂಜರ್ ಅವರ ಮನೆಯಲ್ಲಿ ಬುಧವಾರ ನಿಧನರಾದರು ಎಂದು ರಾಜಕೀಯ ಸಲಹಾ ಸಂಸ್ಥೆ ಕಿಸ್ಸಿಂಜರ್ ಅಸೋಸಿಯೇಟ್ಸ್ ಹೇಳಿಕೆಯಲ್ಲಿ ತಿಳಿಸಿದೆ.
ಆರಂಭಿಕ ಜೀವನ:
1923ರಲ್ಲಿ ಜರ್ಮನಿಯಲ್ಲಿ ಜನಿಸಿದರು. 1938ರಲ್ಲಿ ಕಿಸ್ಸಿಂಜರ್ ಕುಟುಂಬದೊಂದಿಗೆ ಅಮೆರಿಕಾಕ್ಕೆ ಬಂದು ನೆಲೆಸಿ, 1943ರಲ್ಲಿ ಅಲ್ಲಿನ (ಅಮೆರಿಕಾ) ಪೌರತ್ವ ಪಡೆದರು. ಬಳಿಕ ಯುಎಸ್ ಸೈನ್ಯದಲ್ಲಿ ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದರು. ನಂತರ ಕೌಂಟರ್ ಇಂಟೆಲಿಜೆನ್ಸ್ ಕಾರ್ಪ್ಸ್‌ನಲ್ಲಿ ಸೇವೆ ಸಲ್ಲಿಸಿದರು.
1969ರಲ್ಲಿ, ಆಗಿನ ಅಧ್ಯಕ್ಷ ರಿಚರ್ಡ್ ನಿಕ್ಸನ್, ಕಿಸ್ಸಿಂಜರ್ ಅವರನ್ನು ರಾಷ್ಟ್ರೀಯ ಭದ್ರತಾ ಸಲಹೆಗಾರರನ್ನಾಗಿ ನೇಮಿಸಿದರು. ಇದು ಯುಎಸ್ ವಿದೇಶಾಂಗ ನೀತಿಯ ಮೇಲೆ ಅಗಾಧವಾದ ಪ್ರಭಾವ ಬೀರಿತು.
100 ವರ್ಷ ವಯಸ್ಸಾದರೂ ಸಕ್ರಿಯರಾಗಿದ್ದ ಕಿಸ್ಸಿಂಜರ್, ಶ್ವೇತಭವನದ ಮೇಲೆ ಪ್ರಭಾವ ಬೀರುವಷ್ಟು ಹಿಡಿತ ಸಾಧಿಸಿದ್ದರು. ಕಳೆದ ಜುಲೈ ತಿಂಗಳಿನಲ್ಲಿ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರನ್ನು ಭೇಟಿಯಾಗಿ ಅಚ್ಚರಿ ಮೂಡಿಸಿದ್ದರು.
ವಿವಾದಗಳಿಂದಲೇ ಸುದ್ದಿಯಾಗಿದ್ದ ಕಿಸ್ಸಿಂಜರ್:
ಹೆನ್ರಿ ಕಿಸ್ಸಿಂಜರ್ ವಿವಾದಗಳಿಂದಲೇ ಸುದ್ದಿಯಾಗಿದ್ದರು. 1973ರಲ್ಲಿ ವಿಯೇಟ್ನಾಂನ ಲೆ ಡುಕ್ ಥೋ ಅವರೊಂದಿಗೆ ಜಂಟಿಯಾಗಿ ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆಯಾದಾಗ ಭಾರಿ ವಿವಾದ ಉಂಟಾಗಿತ್ತು.
ಕಾಂಬೋಡಿಯಾದಲ್ಲಿ ಗೌಪ್ಯವಾಗಿ ಬಾಂಬ್ ದಾಳಿ ನಡೆಸಿದ್ದರ ಹಿಂದೆ ಕಿಸ್ಸಿಂಜರ್ ಕೈವಾಡವಿದೆ ಎಂದು ನೊಬೆಲ್ ಸಮಿತಿಯ ಇಬ್ಬರು ಸದಸ್ಯರು ರಾಜೀನಾಮೆ ನೀಡಿದ್ದರು. ಅಷ್ಟರಮಟ್ಟಿಗೆ ಕಿಸ್ಸಿಂಜರ್ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ಘೋಷಿಸಿದ್ದು ವಿವಾದಕ್ಕೆ ಕಾರಣವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.