ಮಾ ಸೈ( ಥಾಯ್ಲೆಂಡ್): ಪ್ರವಾಹದಿಂದ ಥಾಮ್ ಲುವಾಂಗ್ ಗುಹೆಯಲ್ಲಿ ಎರಡು ವಾರಗಳಿಂದ ಸಿಲುಕಿರುವ ಫುಟ್‌ಬಾಲ್ ತಂಡದ 13 ಸದಸ್ಯರಲ್ಲಿ ನಾಲ್ವರು ಬಾಲಕರನ್ನು ಸಾವಿನ ದವಡೆಯಿಂದ ಪಾರು ಮಾಡಲಾಗಿದೆ.
ಭಾನುವಾರ ಈ ಬಾಲಕರನ್ನು ಗುಹೆಯಿಂದ ಹೊರಗೆ ಕರೆತರುವಲ್ಲಿ ರಕ್ಷಣಾ ಕಾರ್ಯಾಚರಣೆ ತಂಡ ಯಶಸ್ವಿಯಾಗಿದೆ.
ಜೂನ್ 23ರಂದು 11ರಿಂದ 16 ವರ್ಷದ ಒಳಗಿನ ಫುಟ್‌ಬಾಲ್ ತಂಡದ 12 ಬಾಲಕರು ಮತ್ತು 25 ವರ್ಷದ ತರಬೇತುದಾರ ಮ್ಯಾನ್ಮಾರ್ ಗಡಿಯಲ್ಲಿರುವ ಈ ಗುಹೆ ಒಳಗೆ ತೆರಳಿದ್ದಾಗ ಭಾರಿ ಮಳೆಯಿಂದ ಪ್ರವಾಹ ಉಂಟಾಗಿ ಸಿಲುಕಿಕೊಂಡಿದ್ದರು. ಈ ಘಟನೆ ವಿಶ್ವದ ಗಮನಸೆಳೆದಿತ್ತು.
ಕಳೆದ ಸೋಮವಾರ ಬ್ರಿಟಿಷ್ ಮುಳುಗು ತಜ್ಞರಾದ ರಿಚರ್ಡ್ ಸ್ಟಾಂಟನ್ ಮತ್ತು ಜಾನ್ ವೊಲಾಂಥೆನ್ ಈ ಬಾಲಕರನ್ನು ಪತ್ತೆ ಮಾಡಿದ್ದರು.
ಉತ್ತರ ಚಿಯಾಂಗ್ ರೈ ಪ್ರಾಂತ್ಯದಲ್ಲಿರುವ ಈ ಗುಹೆಯಲ್ಲಿ ಭಾನುವಾರ ಅಪಾಯಕಾರಿ ಮತ್ತು ಕ್ಲಿಷ್ಟಕರ ರಕ್ಷಣಾ ಕಾರ್ಯಾಚರಣೆಯನ್ನು ಕೈಗೊಳ್ಳಲಾಗಿತ್ತು. ಹದಿಮೂರು ವಿದೇಶಿ ಮುಳುಗು ತಜ್ಞರು ಮತ್ತು ಐವರು ಥಾಯ್ ನೌಕಾಪಡೆಯ ಯೋಧರನ್ನು ರಕ್ಷಣಾ ಕಾರ್ಯಕ್ಕೆ ನಿಯೋಜಿಸಲಾಗಿತ್ತು. ಇವರಲ್ಲಿ ಮೂವರು ಬಾಲಕರ ಜತೆಯೇ ಇದ್ದರು. ಇವರಿಗೆ ನೆರವಾಗುವ ಉದ್ದೇಶದಿಂದ ಉಳಿದವರನ್ನು ಮೊದಲ ಒಂದು ಕಿಲೋ ಮೀಟರ್ ಉದ್ದದವರೆಗೆ ಅಲ್ಲಲ್ಲಿ ನಿಯೋಜಿಸಲಾಗಿತ್ತು. ಬಾಲಕರಿಗಾಗಿ ಹೆಚ್ಚುವರಿಯಾಗಿ ಆಮ್ಲಜನಕ ಸಿಲಿಂಡರ್‌ಗಳನ್ನು ಈ ಯೋಧರು ಒಳಗೆ ಕೊಂಡೊಯ್ದಿದ್ದರು.
ಗುಹೆಯಲ್ಲಿನ ಜಲಾವೃತವಾದ ಕಿರಿದಾದ ಮಾರ್ಗದ ಮೂಲಕ ಬಾಲಕರನ್ನು ಹೊರಗೆ ಕರೆತರಲಾಯಿತು. ರಕ್ಷಣಾ ಕಾರ್ಯಾಚರಣೆಯನ್ನು ರಾತ್ರಿ ಸ್ಥಗಿತಗೊಳಿಸಿ ಸೋಮವಾರ ಮುಂದುವರಿಸಲು ನಿರ್ಧರಿಸಲಾಗಿದೆ.
‘ನಾಲ್ವರು ಬಾಲಕರನ್ನು ರಕ್ಷಿಸುವಲ್ಲಿ ಕಾರ್ಯಾಚರಣೆ ತಂಡ ಯಶಸ್ವಿಯಾಗಿದೆ. ಇವರನ್ನು ಹೆಲಿಕಾಪ್ಟರ್ ಮೂಲಕ ಚಿಯಾಂಗ್ ರೈ ಪ್ರಚನುಕ್ರುವಾ ಆಸ್ಪತ್ರೆಗೆ ಕಳುಹಿಸಲಾಗಿದೆ’ ಎಂದು ರಕ್ಷಣಾ ಕಾರ್ಯಾಚರಣೆಯ ನೇತೃತ್ವ ವಹಿಸಿರುವ ನರೊಂಗ್ಸಕ್ ಒಸೊಟ್ಟನಕೊರ್ನ್ ತಿಳಿಸಿದ್ದಾರೆ.
ಗುಹೆ ಇರುವ ಪ್ರದೇಶದಲ್ಲಿ ಮುಂಗಾರು ಮಳೆ ಮತ್ತೆ ಆರಂಭವಾಗಿ ಪ್ರವಾಹ ಉಲ್ಬಣವಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ತಿಳಿಸಿತ್ತು. ಹೀಗಾಗಿ, ಮಳೆ ರಕ್ಷಣಾ ಕಾರ್ಯಕ್ಕೂ ಅಡ್ಡಿಯಾಗುವ ಸಾಧ್ಯತೆಗಳಿದ್ದರಿಂದ ಕಾರ್ಯಾಚರಣೆಯನ್ನು ತ್ವರಿತಗತಿಯಲ್ಲಿ ಕೈಗೊಳ್ಳಲಾಗಿತ್ತು.
ಗುಹೆಯಲ್ಲಿನ ಅಪಾಯದ ಪರಿಸ್ಥಿತಿ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ’ಸಮಯ ಮತ್ತು ನೀರಿನ ಜತೆಗಿನ ಯುದ್ಧ’ ಎಂದೇ ಕರೆಯಲಾಗಿತ್ತು.
* ಮುಂದಿನ ಕಾರ್ಯಾಚರಣೆಗೆ 90 ಮುಳುಗು ತಜ್ಞರನ್ನು ನಿಯೋಜಿಸಲಾಗುವುದು. ಇವರಲ್ಲಿ 50 ವಿದೇಶಿಯರು ಇರಲಿದ್ದಾರೆ
–ನರೊಂಗ್ಸಕ್ ಒಸೊಟ್ಟನಕೊರ್ನ್, ರಕ್ಷಣಾ ಕಾರ್ಯಾಚರಣೆ ಮುಖ್ಯಸ್ಥ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.