ಹೈದರಾಬಾದ್/ಹ್ಯೂಸ್ಟನ್: ಅಮೆರಿಕದ ಟೆಕ್ಸಾಸ್‌ನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಯುವತಿ ಸೇರಿ ನಾಲ್ವರು ಭಾರತೀಯರು ಸಜೀವ ದಹನಗೊಂಡಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ.
ಮೃತರನ್ನು ಹೈದರಾಬಾದ್‌ನ ಆರ್ಯನ್ ರಘುನಾಥ್ ಒರಂಪಟ್ಟಿ, ಅವರ ಸ್ನೇಹಿತ ಪಾರೂಕ್ ಶೇಖ್, ತೆಲುಗು ವಿದ್ಯಾರ್ಥಿ ಲೋಕೇಶ್ ಪಾಲಚಾರ್ಲಾ ಹಾಗೂ ತಮಿಳುನಾಡಿನ ದರ್ಶನಿ ವಾಸುದೇವ್ ಎಂದು ಗುರುತಿಸಲಾಗಿದೆ.
ಶುಕ್ರವಾರ ಮಧ್ಯಾಹ್ನ ದಲ್ಲಾಸ್ ಸಮೀಪ ಐದು ವಾಹನಗಳ ಮಧ್ಯೆ ಸರಣಿ ಅಪಘಾತ ಸಂಭವಿಸಿದೆ. ಟ್ರಾಫಿಕ್‌ನಲ್ಲಿ ವಾಹನಗಳು ನಿಂತಿದ್ದ ವೇಳೆ ವೇಗವಾಗಿ ಬಂದ ಟ್ರಕ್ ನಿಂತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಕಾರಿಗೆ ಬೆಂಕಿ ಹೊತ್ತಿಕೊಂಡು, ಅದರಲ್ಲಿದ್ದ ನಾಲ್ವರು ಸಜೀವ ದಹನಗೊಂಡಿದ್ದಾರೆ. ಮೃತದೇಹಗಳು ಸುಟ್ಟು ಕರಕಲಾದ ಕಾರಣ ಗುರುತುಪತ್ತೆ ಕಷ್ಟವಾಗಿತ್ತು. ನಂತರ ಡಿಎನ್‌ಎ ಆಧರಿಸಿ ಪತ್ತೆಮಾಡಲಾಯಿತು ಎಂದು ಕೊಲಿನ್ ಕೌಂಟಿ ಶೆರಿಫ್ ಅವರ ಕಚೇರಿಯು ಮಾಹಿತಿ ನೀಡಿದೆ.
ನಾಲ್ವರು ಕಾರ್‌ಪೂಲಿಂಗ್ ಆ್ಯಪ್ ಮೂಲಕ ಕಾರನ್ನು ಬುಕ್ ಮಾಡಿಕೊಂಡು ಪ್ರಯಾಣಿಸುತ್ತಿದ್ದರು.
ಅಪಘಾತ ಸಂದರ್ಭದಲ್ಲಿ ಆರ್ಯನ್ ರಘುನಾಥ್ ಮತ್ತು ಸ್ನೇಹಿತ ಫಾರೂಕ್ ಶೇಖ್ ಅವರು ದಲ್ಲಾಸ್‌ನಲ್ಲಿರುವ ಸಂಬಂಧಿ ಮನೆಗೆ ಭೇಟಿ ನೀಡಿ ಬೆಂಟನ್‌ವಿಲ್‌ಗೆ ವಾಪಸಾಗುತ್ತಿದ್ದರು. ಲೋಕೇಶ್ ಅವರು ಪತ್ನಿ ಭೇಟಿ ಮಾಡಲು ಬೆಂಟನ್‌ವಿಲ್‌ಗೆ ತೆರಳುತ್ತಿದ್ದರು. ದರ್ಶನಿ ಅವರು ಚಿಕ್ಕಪ್ಪನನ್ನು ಭೇಟಿಯಾಗಲು ತೆರಳುತ್ತಿದ್ದರು.
ಆರ್ಯನ್ ಅವರ ಕುಟುಂಬವು ಸದ್ಯ ಹೈದರಾಬಾದ್‌ನಲ್ಲಿ ವಾಸವಿದೆ. ಆರ್ಯನ್ ಅವರು ಅಮೃತ ವಿಶ್ವ ವಿದ್ಯಾಪೀಠದಲ್ಲಿ ಬಿ.ಟೆಕ್ ವ್ಯಾಸಂಗ ಮಾಡಿದ್ದು, ಟೆಕ್ಸಾಸ್ ವಿಶ್ವವಿದ್ಯಾಲಯದಿಂದ ಇತ್ತೀಚೆಗೆ ಪದವಿ ಪಡೆದಿದ್ದರು. ಭಾರತಕ್ಕೆ ಮರಳುವ ಮುನ್ನ ಎರಡು ವರ್ಷ ಅಮೆರಿಕದಲ್ಲಿ ಕೆಲಸ ಮಾಡಲು ಬಯಸಿದ್ದರು ಎಂದು ಸಂಬಂಧಿಕರು ತಿಳಿಸಿದ್ದಾರೆ.
ಫಾರೂಕ್ ಸಹ ಹೈದರಾಬಾದ್ ಮೂಲದವರು. ‘ಫಾರೂಕ್ ಅವರು ಎಂ.ಎಸ್ ಓದುವ ಸಲುವಾಗಿ ಕಳೆದ ಮೂರು ವರ್ಷದಿಂದ ಅಮೆರಿಕದಲ್ಲಿ ಇದ್ದರು’ ಎಂದು ತಂದೆ ಮಸ್ತಾನ್ ವಾಲಿ ತಿಳಿಸಿದ್ದಾರೆ.
ಹೈದರಾಬಾದ್ ಮೂಲದ ಲೋಕೇಶ್ ಅವರು ಕಳೆದ ಎರಡೂವರೆ ವರ್ಷಗಳಿಂದ ಬ್ಯಾಂಕ್ ಆಫ್ ಅಮೆರಿಕದಲ್ಲಿ ಕೆಲಸ ಮಾಡುತ್ತಿದ್ದರು. ಕಳೆದ 8 ವರ್ಷಗಳಿಂದ ಅಮೆರಿಕದಲ್ಲಿ ನೆಲೆಸಿದ್ದರು ಎಂದು ಗೊತ್ತಾಗಿದೆ.
ದರ್ಶನಿ ಅವರು ಮೂರು ವರ್ಷಗಳಿಂದ ಅಮೆರಿಕದಲ್ಲಿ ನೆಲೆಸಿದ್ದರು. ಎಂ.ಎಸ್ ವಿದ್ಯಾಭ್ಯಾಸ ಪೂರ್ಣಗೊಳಿಸಿ ಒಂದು ವರ್ಷದಿಂದ ಉದ್ಯೋಗ ಮಾಡುತ್ತಿದ್ದರು ಎಂದು ಅವರು ಪೋಷಕರು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.