ADVERTISEMENT

ಅಮೆರಿಕ: ಭಾರತ ಮೂಲದ ಒಂದೇ ಕುಟುಂಬದ ನಾಲ್ವರ ಶವಗಳು ಪತ್ತೆ

ಪಿಟಿಐ
Published 14 ಫೆಬ್ರುವರಿ 2024, 12:45 IST
Last Updated 14 ಫೆಬ್ರುವರಿ 2024, 12:45 IST
<div class="paragraphs"><p>ಪಿಸ್ತೂಲಿನ ಚಿತ್ರ</p></div>

ಪಿಸ್ತೂಲಿನ ಚಿತ್ರ

   

ನ್ಯೂಯಾರ್ಕ್: ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಭಾರತ ಮೂಲದ ಒಂದೇ ಕುಟುಂಬದ ನಾಲ್ವರ ಶವಗಳು ಪತ್ತೆಯಾಗಿವೆ.

ಕ್ಯಾಲಿಫೋರ್ನಿಯಾದ ಸ್ಯಾನ್‌ಮಾಟಿಯೊ ಕೌಂಟಿಯ ನಿವಾಸವೊಂದರಲ್ಲಿ ದಂಪತಿ ಹಾಗೂ ಅವಳಿ ಮಕ್ಕಳ ಶವಗಳು ಪತ್ತೆಯಾಗಿವೆ. ಈ ಕುರಿತು ಆತ್ಮಹತ್ಯೆ–ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ADVERTISEMENT

ಮೃತರನ್ನು ಕೇರಳ ಮೂಲದ ದಂಪತಿ ಆನಂದ್ ಸುಜಿತ್ ಹೆನ್ರಿ (42), ಅವರ ಪತ್ನಿ ಅಲೈಸ್ ಪ್ರಿಯಾಂಕಾ (40) ಹಾಗೂ ಅವರ ನಾಲ್ಕು ವರ್ಷದ ಅವಳಿ ಮಕ್ಕಳನ್ನು ಪೊಲೀಸರು ಗುರುತಿಸಿದ್ದಾರೆ.  

ಆನಂದ್ ಸುಜಿತ್ ಹೆನ್ರಿ ಅವರು ಎರಡು ವರ್ಷಗಳ ಹಿಂದಷ್ಟೇ ಸ್ಯಾನ್‌ಮಾಟಿಯೊ ಕೌಂಟಿಯಲ್ಲಿ ಸುಮಾರು ₹17.50 ಕೋಟಿ ವೆಚ್ಚದಲ್ಲಿ ನಿವಾಸ ಖರೀದಿಸಿದ್ದರು. ಅಲ್ಲಿ ಪತ್ನಿ, ಇಬ್ಬರು ಮಕ್ಕಳ ಜೊತೆ ವಾಸವಾಗಿದ್ದರು. 

ಆನಂದ್ ಸುಜಿತ್ ಹೆನ್ರಿ ಹಾಗೂ ಅಲೈಸ್ ಪ್ರಿಯಾಂಕಾ ಅವರ ಮೃತದೇಹಗಳು ಶೌಚಾಲಯದಲ್ಲಿ ಪತ್ತೆಯಾಗಿವೆ. ಅಲ್ಲಿಯೇ ಪಿಸ್ತೂಲ್‌ ಮತ್ತು ಗುಂಡುಗಳು ದೊರೆತಿವೆ. ಆದರೆ ಅವರ ಇಬ್ಬರ ಮಕ್ಕಳ ಶವಗಳು ಮಲಗುವ ಕೋಣೆಯಲ್ಲಿ ದೊರೆತಿವೆ. ಮಕ್ಕಳ ದೇಹದ ಮೇಲೆ ಯಾವುದೇ ಗಾಯದ ಗುರುತುಗಳಿಲ್ಲ. ಹೀಗಾಗಿ ಈ ಇಬ್ಬರು ಮಕ್ಕಳನ್ನು ಉಸಿರುಗಟ್ಟಿಸಿ, ಕತ್ತು ಹಿಸುಕಿ ಹತ್ಯೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. 

ಈ ಕುರಿತು ಮಾಹಿತಿ ಪಡೆದ ತಕ್ಷಣವೇ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಆದರೆ, ಮನೆಯ ಒಳಗೆ ಯಾರೂ ಬಲವಂತವಾಗಿ ಬಂದಿರುವುದು ದೃಢಪಟ್ಟಿಲ್ಲ. ಈ ಹಿನ್ನೆಲೆಯಲ್ಲಿ ಕೊಲೆ–ಆತ್ಮಹತ್ಯೆ ಎಂಬುದಾಗಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಅಮೆರಿಕ ಪೊಲೀಸರು ಹೇಳಿದ್ದಾರೆ.

ಕೆಲವು ತಿಂಗಳುಗಳಲ್ಲಿ 9 ಮಂದಿ ಭಾರತೀಯ–ಅಮೆರಿಕನ್ನರು ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.