ವಾಷಿಂಗ್ಟನ್: ಖಾಲಿಸ್ತಾನಿ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್ ಕೊಲೆ ಪ್ರಕರಣ ಸಂಬಂಧ ಭಾರತ ಮೂಲದ ನಾಲ್ಕನೇ ಆರೋಪಿಯನ್ನು ಕೆನಡಾದ ಅಧಿಕಾರಿಗಳು ಶನಿವಾರ ಬಂಧಿಸಿದ್ದಾರೆ ಎಂದು ಅಧಿಕೃತ ಪ್ರಕಟಣೆಯೊಂದು ತಿಳಿಸಿದೆ.
ಬ್ರಾಂಪ್ಟನ್, ಸರ್ರೆ ಹಾಗೂ ಅಬಾಟ್ಸ್‌ಫೋರ್ಡ್ ಪ್ರದೇಶದ ನಿವಾಸಿ 22 ವರ್ಷದ ಅಮರ್‌ದೀಪ್ ಸಿಂಗ್ ಎಂಬುವವರನ್ನು ಬಂಧಿಸಲಾಗಿದೆ. ಅವರ ಮೇಲೆ ಕೊಲೆ ಹಾಗೂ ಕೊಲೆಗೆ ಕುಮ್ಮಕ್ಕು ನೀಡಿದ ಆರೋಪ ಹೊರಿಸಲಾಗಿದೆ.
ಸಂಯೋಜಿತ ನರಹತ್ಯೆ ತನಿಖಾ ತಂಡವು (ಐಎಚ್‌ಐಟಿ) ಇವರನ್ನು ಮೇ 11ರಂದು ಬಂಧಿಸಿದೆ. ಅವರು ಈಗಾಗಲೇ ಪ್ರಕರಣವೊಂದರ ಸಂಬಂಧ ಪೀಲ್ ಪ್ರಾದೇಶಿಕ ಪೊಲೀಸರ ವಶದಲ್ಲಿ ಇದ್ದರು ಎಂದು ಪ್ರಕಟಣೆ ತಿಳಿಸಿದೆ.
‘ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ಭಾಗಿದಾರರನ್ನು ಹೊಣೆಗಾರರನ್ನಾಗಿ ಮಾಡಲು ನಾವು ನಡೆಸುತ್ತಿರುವ ತನಿಖೆಯ ಸ್ವರೂಪವನ್ನು ಈ ಬಂಧನವು ತೋರಿಸುತ್ತದೆ’ ಎಂದು ಐಎಚ್‌ಐಟಿ ವರಿಷ್ಠಾಧಿಕಾರಿ ಮಂದೀಪ್ ಮೂಕರ್ ತಿಳಿಸಿದ್ದಾರೆ.
2023ರ ಜೂನ್ 18ರಂದು ಸರ್ರೆ ಬ್ರಿಟಿಷ್ ಕೊಲಂಬಿಯಾದ ಗುರುನಾನಕ್ ಸಿಖ್ ಗುರುದ್ವಾರದ ಸಮೀಪದ ಹರ್ದೀಪ್ ಸಿಂಗ್ ನಿಜ್ಜರ್‌ನನ್ನು ಕೊಲೆ ಮಾಡಲಾಗಿತ್ತು.
ಪ್ರಕರಣ ಸಂಬಂಧ ಈಗಾಗಲೇ ಭಾರತ ಮೂಲದ ಕರಣ್ ಬ್ರಾರ್ (22), ಕಮಲ್‌ಪ್ರೀತ್ ಸಿಂಗ್ (22) ಹಾಗೂ ಕರಣ್‌ಪ್ರೀತ್ ಸಿಂಗ್ (28) ಎಂಬವರನ್ನು ಬಂಧಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.