ADVERTISEMENT

ಫ್ರಾನ್ಸ್‌ | ಎರಡನೇ ದಿನವೂ ರೈಲು ಸಂಚಾರ ವ್ಯತ್ಯಯ; ಪ್ರಯಾಣಿಕರಿಗೆ ತೊಂದರೆ

ಏಜೆನ್ಸೀಸ್
Published 27 ಜುಲೈ 2024, 14:25 IST
Last Updated 27 ಜುಲೈ 2024, 14:25 IST
<div class="paragraphs"><p>ಹಾನಿಗೊಳಗಾದ ಕೇಬಲ್‌ಗಳ ದುರಸ್ತಿ ಕಾರ್ಯದಲ್ಲಿ ನಿರತರಾಗಿದ್ದ ಸಿಬ್ಬಂದಿ </p></div>

ಹಾನಿಗೊಳಗಾದ ಕೇಬಲ್‌ಗಳ ದುರಸ್ತಿ ಕಾರ್ಯದಲ್ಲಿ ನಿರತರಾಗಿದ್ದ ಸಿಬ್ಬಂದಿ

   

–ಎಎಫ್‌ಪಿ ಚಿತ್ರ

ಪ್ಯಾರಿಸ್: ಫ್ರಾನ್ಸ್‌ನಾದ್ಯಂತ ಸತತ ಎರಡನೇ ದಿನವೂ ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಗಿದ್ದು, ಸಾವಿರಾರು ಪ್ರಯಾಣಿಕರು ತೊಂದರೆ ಅನುಭವಿಸಿದ್ದಾರೆ. 

ADVERTISEMENT

ಸೋಮವಾರದ ವೇಳೆಗೆ ರೈಲು ಸಂಚಾರ ಸಹಜ ಸ್ಥಿತಿಗೆ ಬರಲಿದೆ ಎಂದು ಫ್ರಾನ್ಸ್‌ನಲ್ಲಿ ರೈಲ್ವೆ ಸಂಪರ್ಕವನ್ನು ನಿರ್ವಹಿಸುತ್ತಿರುವ ಎಸ್‌ಎನ್‌ಸಿಎಫ್‌ ರೈಲು ಕಂಪನಿಯ ಮುಖ್ಯಸ್ಥ ಜೀನ್‌ ಪಿಯೆರ್ ಫರಾಂಡೊ ಶನಿವಾರ ಹೇಳಿದ್ದಾರೆ. ರೈಲುಗಳು ರದ್ದಾಗಿರುವುರಿಂದ ವಾರಾಂತ್ಯದ ಅವಧಿಯಲ್ಲಿ 1.60 ಲಕ್ಷ ಪ್ರಯಾಣಿಕರು ತೊಂದರೆ ಅನುಭವಿಸಿದ್ದಾರೆ ಎಂದು ಸಾರಿಗೆ ಇಲಾಖೆಯ ಮೂಲಗಳು ಹೇಳಿವೆ.

ಫ್ರಾನ್ಸ್‌ನ ಉತ್ತರ, ಪಶ್ಚಿಮ ಮತ್ತು ಪೂರ್ವ ಭಾಗದ ಮಾರ್ಗಗಳಲ್ಲಿ ಸಂಚರಿಸಬೇಕಿದ್ದ ರೈಲುಗಳಲ್ಲಿ ಮೂರನೇ ಒಂದರಷ್ಟು ರೈಲುಗಳು ರದ್ದಾಗಿವೆ. ಪ್ಯಾರಿಸ್‌– ಲಂಡನ್‌ ನಡುವಣ ‘ಯೂರೊಸ್ಟಾರ್‌’ ಹೈಸ್ಪೀಡ್‌ ರೈಲುಗಳಲ್ಲಿ ಕಾಲು ಭಾಗದಷ್ಟು ರೈಲುಗಳು ಶನಿವಾರ ಸಂಚಾರ ನಡೆಸಲಿಲ್ಲ. 

ಒಲಿಂ‍‍ಪಿಕ್‌ ಕೂಟದ ಉದ್ಘಾಟನಾ ಸಮಾರಂಭಕ್ಕೆ ಕೆಲವೇ ಗಂಟೆಗಳ ಮುನ್ನ ಶುಕ್ರವಾರ ಪ್ಯಾರಿಸ್‌ನ ವಿವಿಧೆಡೆ ರೈಲು ಸಂಪರ್ಕ ಜಾಲದ ಮೇಲೆ ಸಂಘಟಿತ ದಾಳಿ ನಡೆದಿತ್ತು. ಸಿಗ್ನಲ್‌ ಮೂಲಸೌಕರ್ಯ, ಕೇಬಲ್‌ಗಳು ಸೇರಿದಂತೆ ರೈಲ್ವೆಗೆ ಸೇರಿದ ಸ್ವತ್ತುಗಳಿಗೆ ಬೆಂಕಿ ಹಚ್ಚಲಾಗಿತ್ತು. ಇದರಿಂದ ಫ್ರಾನ್ಸ್‌ನಾದ್ಯಂತ ರೈಲು ಸಂಚಾರ ಅಸ್ತವ್ಯಸ್ತಗೊಂಡಿತ್ತು.

ದಾಳಿಯ ಹೊಣೆಯನ್ನು ಯಾರೂ ಹೊತ್ತುಕೊಂಡಿಲ್ಲ. ‘ಘಟನೆ ಬಗ್ಗೆ ತನಿಖೆ ಮುಂದುವರಿದಿದೆ. ವಿಧ್ವಂಸಕ ಕೃತ್ಯದ ಹಿಂದಿರುವವರ ಕುರಿತು ಕೆಲವೊಂದು ಸುಳಿವು ಲಭಿಸಿದ್ದು, ಅವರನ್ನು ಶೀಘ್ರದಲ್ಲೇ ಪತ್ತೆ ಮಾಡಲಾಗುವುದು’ ಎಂದು ಫ್ರಾನ್ಸ್‌ ಒಳಾಡಳಿತ ಸಚಿವ ಜೆರಾಲ್ಡ್‌ ಡಾರ್ಮಾನ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.