ನಿಕೋಟಿನ್ ಕೊರೊನಾ ವೈರಸ್‌ನಿಂದ ರಕ್ಷಣೆ ನೀಡುತ್ತದೆ ಎಂದು ಪ್ರಾನ್ಸ್‌ನ ಹೊಸದೊಂದು ಅಧ್ಯಯನ ಹೇಳಿದೆ. ಈ ಹಿನ್ನೆಲೆಯಲ್ಲಿ ಮಾರಣಾಂತಿಕ ಕಾಯಿಲೆಯನ್ನು ತಡೆಗಟ್ಟಲು ಅಥವಾ ಚಿಕಿತ್ಸೆ ನೀಡಲು ನಿಕೋಟಿನ್ ಬಳಸಬಹುದೇ ಎಂಬುದರ ನಿಟ್ಟಿನಲ್ಲಿ ಮತ್ತಷ್ಟು ಪರೀಕ್ಷೆ, ಪ್ರಯೋಗಗಳನ್ನು ನಡೆಸಲು ಅಧ್ಯಯನ ತಂಡ ಯೋಜಿಸಲಾಗಿದೆ.
ಪ್ಯಾರಿಸ್‌ನ ಪ್ರತಿಷ್ಠಿತ ಆಸ್ಪತ್ರೆಯ ಸಂಶೋಧಕರೇ ಈ ಅಧ್ಯಯನ ನಡೆಸಿದೆ. 343 ಕೊರೊನಾ ವೈರಸ್ ಪೀಡಿತರು, ಅವರ ಜೊತೆಗೆ ಸೋಂಕಿನ ಅಲ್ಪ ಪ್ರಮಾಣದ ಲಕ್ಷಣವಿರುವ 139 ಮಂದಿಯನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು ಎಂದು ವರದಿ ಹೇಳಿದೆ.
ಈ ಪೈಕಿ ಸಿಗರೇಟು ಸೇವನೆ ಅಭ್ಯಾಸ ಹೊಂದಿದ್ದವರ ಸಂಖ್ಯೆ ತೀರ ಕಡಿಮೆ ಇತ್ತು. ಈ ಸಂಖ್ಯೆಯನ್ನು ಫ್ರಾನ್ಸ್‌ನ ಒಟ್ಟಾರೆ ಜನಸಂಖ್ಯೆಯಲ್ಲಿ ಶೇ. 35ರಷ್ಟು ಇರುವ ಸಿಗರೇಟು ವ್ಯಸನಿಗಳ ಸಂಖ್ಯೆಯೊಂದಿಗೆ ತುಲನೆ ಮಾಡಿ ನೋಡಿದಾಗ ಅದು ಅತೀ ನಗಣ್ಯವಾಗಿತ್ತು ಎಂದು ಅಧ್ಯಯನಕಾರರು ಅಭಿಪ್ರಾಯಪಟ್ಟಿದ್ದಾರೆ.
ಸಂಶೋಧನೆಗೆ ಒಳಪಟ್ಟವರ ಪೈಕಿ ಕೇವಲ ಶೇ. 5 ರಷ್ಟು ಮಂದಿ ಮಾತ್ರ ಸಿಗರೇಟು ವ್ಯಸನಿಗಳಾಗಿದ್ದರು ಎಂದು ಸಂಶೋಧಕರು ಹೇಳಿದ್ದಾರೆ.
ಕಳೆದ ತಿಂಗಳು ‘ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್’ ನಲ್ಲಿ ಇದೇ ಫಲಿತಾಂಶವನ್ನೇ ಧ್ವನಿಸುವ ವರದಿಯೊಂದು ಪ್ರಕಟವಾಗಿತ್ತು. ಅದರ ಪ್ರಕಾರ, ಚೀನಾದ 1000 ಸೋಂಕಿತರಲ್ಲಿ ಶೇ. 12.6 ರಷ್ಟು ಜನ ಮಾತ್ರ ಸಿಗರೇಟು ವ್ಯಸನಿಗಳಾಗಿದ್ದರು. ಆ ಸಂಖ್ಯೆಯು ಚೀನಾದ ಒಟ್ಟು ಜನಸಂಖ್ಯೆಯಲ್ಲಿ ಶೇ. 26ರಷ್ಟು ಇರುವ ಸಿಗರೇಟು ವ್ಯಸನಿಗಳ ಸಂಖ್ಯೆಗೆ ಹೋಲಿಸಿದರೆ ತೀರಾ ಕಡಿಮೆಯಾಗಿತ್ತು ಎಂದು ವರದಿಯಲ್ಲಿ ಹೇಳಲಾಗಿತ್ತು.
ವೈರಸ್ ಅನ್ನು ಹೇಗೆ ತಡೆಯುತ್ತದೆ ನಿಕೋಟಿನ್
ಉಸಿರಾಟ ವ್ಯವಸ್ಥೆಯಲ್ಲಿ ನಿಕೋಟಿನ್ಅಂಟಿಕೊಂಡಿರುತ್ತದೆ. ಇದು ವೈರಸ್‌ನ ಶ್ವಾಸಕೋಶ ಪ್ರವೇಶವನ್ನು ತಡೆಯುತ್ತದೆ. ಆ ಮೂಲಕ ವೈರಸ್ ದೇಹಕ್ಕೆ ವ್ಯಾಪಿಸುವುದನ್ನೂ ತಡೆಯುತ್ತದೆ ಎಂದು ಪ್ಯಾರಿಸ್‌ನ ‘ಪಾಶ್ಚರ್ ಇನ್‌ಸ್ಟಿಟ್ಯೂಟ್’ನ ಹೆಸರಾಂತ ನರ ಜೀವಶಾಸ್ತ್ರಜ್ಞ, ಹಾಗೂ ಅಧ್ಯಯನದಲ್ಲಿ ಭಾಗಿಯಾಗಿದ್ದ ಡಾ. ಜೀನ್ ಪೆರ್ರಿ ಚೇಂಜಕ್ಸ್ ಹೇಳಿದ್ದಾರೆ.
ಅಧ್ಯಯನದಲ್ಲಿ ಕಂಡು ಬಂದ ಅಂಶಗಳ ಆಧಾರದ ಮೇಲೆತಂಡ ಮತ್ತಷ್ಟು ಹೆಚ್ಚಿನ ಕ್ಲಿನಿಕಲ್ ಟ್ರಯಲ್‌ಗಳನ್ನು ನಡೆಸಲು ಉದ್ದೇಶಿಸಿದ್ದು, ಫ್ರಾನ್ಸ್‌ನ ಆರೋಗ್ಯ ಅಧಿಕಾರಿಗಳ ಅನುಮೋದನೆಗಾಗಿ ಕಾಯುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.